ಇಬ್ಬರು ಹೆಣ್ಣುಮಕ್ಕಳೊಂದಿಗೆ ಶೈನಿ ಆತ್ಮಹತ್ಯೆ ಕೇಸ್​​; ಕ್ರೂರ ಮನಸ್ಥಿತಿಯ ಆರೋಪಿಗೆ ಜಾಮೀನು ರದ್ದುಗೊಳಿಸಿ | Shiny Death

ವಿಜಯವಾಣಿ (68)
Published on

Shiny Death: ಈ ತಿಂಗಳ 09ರಂದು ಪತಿಯೊಂದಿಗೆ ದೂರವಾಣಿ ಕರೆಯಲ್ಲಿ ಕೆಲ ನಿಮಿಷಗಳ ಕಾಲ ಮಾತನಾಡಿದ ಬೆನ್ನಲ್ಲೇ ತನ್ನಿಬ್ಬರ ಹೆಣ್ಣುಮಕ್ಕಳ ಜತೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಟ್ಟಾಯಂನಲ್ಲಿ ವರದಿಯಾಗಿತ್ತು. ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಪ್ರಾಣಬಿಟ್ಟ ಮಹಿಳೆ, ತನ್ನೊಂದಿಗೆ ತನ್ನ ಮಕ್ಕಳ ಪ್ರಾಣವನ್ನು ಕಸಿದುಕೊಂಡಿದ್ದು ದುರಂತ. ಈ ಭೀಕರ ಘಟನೆ ಹಿಂದಿರುವ ಕಾರಣವೇನು ಎಂದು ತನಿಖೆ ಕೈಗೊಂಡ ಪೊಲೀಸರಿಗೆ ಆರಂಭದಲ್ಲೇ ಪತಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅಂತೆಯೇ ಆತನೇ ಆರೋಪಿ ಎಂಬುದಕ್ಕೆ ದೂರವಾಣಿ ಕರೆ ಮತ್ತು ಒಂದಷ್ಟು ದಾಖಲೆಗಳು ಸಾಕ್ಷಿಯಾಗಿವೆ.

ಸಾಲದ ಕೂಪ

ರೈಲಿನ ಮುಂದೆ ಜಿಗಿದು ತನ್ನ ಮಕ್ಕಳೊಂದಿಗೆ ದುರಂತ ಅಂತ್ಯ ಕಂಡ ಮಹಿಳೆ ಶೈನಿ, ತಾನು ಎದುರಿಸುತ್ತಿದ್ದ ಕಠಿಣ ಪರಿಸ್ಥಿತಿ ಮತ್ತು ಮನೆಯಲ್ಲಿದ್ದ ಸವಾಲುಗಳನ್ನು ಕರಿಂಕುನ್ನಂ ಕುಟುಂಬಶ್ರೀ ಅಧ್ಯಕ್ಷೆ ಉಷಾ ಅವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದರು. ಇವರಿಬ್ಬರ ನಡುವಿನ ಫೋನ್ ಸಂಭಾಷಣೆಯನ್ನು ಹೊರತೆಗೆದ ಖಾಕಿ ಪಡೆಗೆ, ಶೈನಿ ಸಾವಿನ ಹಿಂದೆ ಸಾಲದ ಶೂಲವಿತ್ತು ಎಂಬುದು ಗೊತ್ತಾಗಿದೆ. ಆರ್ಥಿಕ ತೊಂದರೆಗಳ ಜತೆ ಜತೆಗೆ ಪತಿಯ ಅವಾಚ್ಯ ಪದಗಳ ಬಳಕೆ, ನಿಂದನೆ ಆಕೆಯ ಸಾವಿಗೆ ಕಾರಣ ಎಂಬುದು ಬಹಿರಂಗಗೊಂಡಿತು.

ಪ್ರಸ್ತುತ ಮೃತ ಶೈನಿಯ ಪತಿ ನೋಬಿ ಲೂಕಸ್​ನನ್ನು ಬಂಧಿಸಿರುವ ಕೊಟ್ಟಾಯಂ ಪೊಲೀಸರು, ಆರೋಪಿ ವಿರುದ್ಧ ವರದಿಗಳನ್ನು ಸಲ್ಲಿಸಿದ್ದಾರೆ. ಇದೇ ದಾಖಲೆಗಳನ್ನು ಕೋರ್ಟ್​ ಮುಂದೆ ಹಾಜರುಪಡಿಸಿ, ಮೂವರ ಜೀವವನ್ನು ಬಲಿಪಡೆದ ನೋಬಿಗೆ ಜಿಲ್ಲಾ ಸೆಷನ್ಸ್​ ನ್ಯಾಯಾಲಯ ಜಾಮೀನು ಕೊಡಬಾರದು. ಜಾಮೀನು ಆದೇಶ ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾಸಿದಂತೆ ಆಗುತ್ತದೆ ಎಂದು ಮನವಿ ಮಾಡಿದ್ದಾರೆ.

9 ಮತ್ತು 10 ವರ್ಷದ ಇಬ್ಬರು ಹೆಣ್ಣು ಮಕ್ಕಳ ಸಾವಿಗೆ ಆರೋಪಿಯೇ ಕಾರಣ. ಆತನ ಬಳಿ ಹಣವಿದೆ ಮತ್ತು ಪ್ರಭಾವಿ ಆದ ಹಿನ್ನೆಲೆ ಸಾಕ್ಷಿಗಳ ದಿಕ್ಕು ತಪ್ಪಿಸುವುದು, ಸಾಕ್ಷ್ಯಗಳನ್ನು ನಾಶಮಾಡುವ ಸಾಧ್ಯತೆಯಿದೆ. ಈ ಘಟನೆ ಸಮಾಜವನ್ನೇ ಬೆಚ್ಚಿಬೀಳಿಸಿರುವುದರಿಂದ, ಕೋರ್ಟ್​ ಜಾಮೀನು ನೀಡಬಾರದು. ಆರೋಪಿ ಪರ ತೀರ್ಪು ಬಂದರೆ ಜನರಲ್ಲಿ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಕುಸಿಯುತ್ತದೆ. ಆರೋಪಿಯು ತನ್ನ ಸ್ವಂತ ಮಕ್ಕಳನ್ನು ಸಹ ನೋಡಿಕೊಳ್ಳದಷ್ಟು ಕ್ರೂರ ವ್ಯಕ್ತಿ. ಆತನಿಗೆ ಜಾಮೀನು ನಿರಾಕರಿಸುವುದು ಉತ್ತಮ ಎಂದು ಪೊಲೀಸ್ ವರದಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net