ಕೆಲವೇ ನಿಮಿಷಗಳಲ್ಲಿ ನಕಲಿ ಆಧಾರ್​-ಪಾನ್​ ಕಾರ್ಡ್​ ಸಿದ್ಧ! ChatGPT ಎಡವಟ್ಟಿನಿಂದ ಸೈಬರ್ ಕ್ರೈಮ್​ ಹೆಚ್ಚು!? ಹೀಗಿದೆ ವರದಿ

ವಿಜಯವಾಣಿ - 2025-04-05T074811.431
Published on

ChatGPT: ಪ್ರಸ್ತುತ ಕಾಲಘಟ್ಟದಲ್ಲಿ ಹೊಚ್ಚ ಹೊಸ ಆವಿಷ್ಕಾರಗಳು ಜನರನ್ನು ದಿಗ್ಭ್ರಮೆಗೊಳಿಸುತ್ತಿದೆ. ಆಧುನಿಕ ಜಗತ್ತಿನಲ್ಲಿ ಟೆಕ್ನಾಲಜಿಗಳ ಆಗರ ಶರವೇಗದಲ್ಲಿ ಸಾಗುತ್ತಿರುವ ಸಂಗತಿ ನಮಗೆಲ್ಲ ತಿಳಿದೇ ಇದೆ. ಈ ಮಧ್ಯೆ ಎಐ, ಚಾಟ್​ಜಿಪಿಟಿ, ಎಲೋನ್ ಮಸ್ಕ್​ ಅವರ ಗ್ರೋಕ್​ ಎಲ್ಲವೂ ಅಯೋಮಯವಾಗಿದೆ.

ಈಗ ಒಂದೇ ಒಂದು ಆತಂಕಕಾರಿ ವಿಷಯ ನೆಟ್ಟಿಗರಲ್ಲಿ ಭಯ ಬೀಳಿಸಿರುವುದು ಎಂದರೆ ಅದು ಓಪನ್‌ಎಐನ ಚಾಟ್‌ಜಿಪಿಟಿ. ಹೌದು, ಇದು ಬಿಡುಗಡೆಯಾದಾಗಿನಿಂದ, ವಿಶೇಷವಾಗಿ ವಿಷಯ ಮತ್ತು ಚಿತ್ರ ರಚನೆಗೆ ಸಂಬಂಧಿಸಿದಂತೆ ಗೌಪ್ಯತೆ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಅತ್ಯಂತ ವಾಸ್ತವಿಕ ಮತ್ತು ನಿಖರವಾದ ವಿಷಯವನ್ನು ಉತ್ಪಾದಿಸುವ ಎಐ ಸಾಮರ್ಥ್ಯವು ಗಮನಾರ್ಹವಾಗಿ ವಿಕಸನಗೊಂಡಿದೆ. ಇದರ ಸಹಾಯದಿಂದ ಹೊಸತನ್ನು ಸೃಷ್ಟಿಸುವ ಅವಕಾಶಗಳು ಹೆಚ್ಚಿವೆ. ಹೀಗಿರುವಾಗ ಜನಸಾಮಾನ್ಯರಿಗೆ ತೀರ ಅಗತ್ಯವಾಗಿರುವ ಆಧಾರ್​ ಕಾರ್ಡ್​ ಮತ್ತು ಪ್ಯಾನ್​ ಕಾರ್ಡ್​ನಂತಹ ಬಹುಮುಖ್ಯ ದಾಖಲಾತಿಗಳು ಈಗ ಕ್ಷಣಮಾತ್ರದಲ್ಲಿ ನಕಲಿ ರೂಪದಲ್ಲಿ ಲಭ್ಯವಾಗುತ್ತಿವೆ. ಅದು ಈ ಚಾಟ್​ಜಿಪಿಟಿಯಿಂದ ಎಂಬುದು ಅಚ್ಚರಿ ಮೂಡಿಸಿದೆ.

ಏನಿದು ನಕಲಿ ಆಧಾರ್​-ಪಾನ್​?

ಚಾಟ್​ಜಿಪಿಟಿ ಸಹಾಯದಿಂದ ನಕಲಿ ಆಧಾರ್​ ಮತ್ತು ಪಾನ್ ಕಾರ್ಡ್​ಗಳನ್ನು ಸುಲಭವಾಗಿ ರಚಿಸಬಹುದಾಗಿದೆ. ಇವು ಸೈಬರ್ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ನೀಡುವ ಗುರುತಿನ ದಾಖಲೆಗಳನ್ನು ಹೆಚ್ಚು ಸಮಯ ವ್ಯರ್ಥಗೊಳಿಸದೆ ಸುಲಭಗೊಳಿಸಲು ಈ ಟೆಕ್ನಾಲಜಿಗಳು ಉತ್ತಮ ಸಾಧನವಾಗಿ ಪರಿಣಮಿಸಿವೆ ಎಂದೇ ಹೇಳಬಹುದು. ಆದರೆ, ಇವುಗಳ ನಕಲಿಯತ್ತು ಸೈಬರ್​ ಕ್ರಿಮಿನಲ್​ಗಳಿಗೆ ರೆಕ್ಕೆ ನೀಡುತ್ತಿರುವುದು ತೀರ ಕಳವಳಕಾರಿ.

ಜಿಪಿಟಿ-4 ಈ ಕೆಲಸವನ್ನು ಬಹಳ ಸರಳಗೊಳಿಸಿದೆ. ಅನೇಕ ಉತ್ಸಾಹಭರಿತ ಜಾಲತಾಣದ ಬಳಕೆದಾರರು ನಕಲಿ ಆಧಾರ್​ ಮತ್ತು ಪಾನ್ ಕಾರ್ಡ್​ಗಳನ್ನು ಇದರ ಸಹಾಯದಿಂದ ರಚಿಸಬಹುದು ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಬಹುತೇಕರು ಈ ಕುರಿತಂತೆ ಇತರರಿಗೂ ಎಚ್ಚರಿಸಲು ತಮ್ಮ ಎಕ್ಸ್‌ ಖಾತೆಯಲ್ಲಿ (ಹಿಂದಿನ ಟ್ವಿಟರ್) ಸರಣಿ ಪೋಸ್ಟ್​ಗಳನ್ನು ಹಾಕುವ ಮುಖೇನ ಮಾಹಿತಿ ಹಂಚಿಕೊಂಡಿದ್ದಾರೆ. ಯಶವಂತ್ ಸಾಯಿ ಪಾಲಘಾಟ್ ಎಂಬ ಬಳಕೆದಾರರೊಬ್ಬರು, "ಚಾಟ್‌ಜಿಪಿಟಿ ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ತಕ್ಷಣವೇ ತಯಾರು ಮಾಡಿಕೊಡುತ್ತಿದೆ. ಅದು ಹೆಚ್ಚು ಸಮಯ ತೆಗೆದುಕೊಳ್ಳದೆ. ಇದು ಗಂಭೀರ ಭದ್ರತಾ ಅಪಾಯವಾಗಿದೆ. ಅದಕ್ಕಾಗಿಯೇ ಎಐ ಅನ್ನು ಒಂದು ನಿರ್ದಿಷ್ಟ ಮಟ್ಟಿಗೆ ನಿಯಂತ್ರಿಸಬೇಕು" ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು, "ಕ್ಷಣಮಾತ್ರದಲ್ಲಿ ಲಭ್ಯವಾಗುವ ಇಂತಹ ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್​ ಮಾದರಿಗಳು ಅಪಾಯದ ಸಂಕೇತ. ಇವುಗಳಿಂದ ಸೈಬರ್ ಕ್ರೈಮ್​ ಪ್ರಕರಣಗಳು ಕ್ರಮೇಣವಾಗಿ ಹೆಚ್ಚಾಗಲಿವೆ ಮತ್ತು ಅಪರಾಧಿಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಳ್ಳಲು ಸುಲಭವಾಗುತ್ತದೆ" ಎಂದು ತಮ್ಮ ಕಳವಳವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net