CSK vs DC ಪಂದ್ಯಕ್ಕಿಂತ ಟಾಸ್​ ಮೇಲೆ ಮೂಡಿದೆ ಅಭಿಮಾನಿಗಳ ಕಣ್ಣು! ಇದೇ ನಿಜವಾ?

ವಿಜಯವಾಣಿ - 2025-04-05T070616.352
Published on

CSK vs DC: ಮಾ.22ರಿಂದ ಶುರುವಾದ ಐಪಿಎಲ್​ 18ನೇ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಉತ್ತಮ ಆಲ್​ರೌಂಡ್ ಪ್ರದರ್ಶನದ ಮೂಲಕ ಪ್ರಸ್ತುತ ಐಪಿಎಲ್​ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಮಿಂಚುತ್ತಿದೆ. ಈ ಮಧ್ಯೆ ಐದು ಬಾರಿ ಚಾಂಪಿಯನ್ಸ್ ತಂಡ ಎಂದೇ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್​, ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಮ್ಯಾಚ್​ನಲ್ಲಿ ಗೆಲುವು ಸಾಧಿಸಿದೆ. ಆದರೂ ಉತ್ಸಾಹವನ್ನು ಕಳೆದುಕೊಳ್ಳದೆ ಮುಂದಿನ ಪಂದ್ಯದಲ್ಲಿ ಗೆದ್ದು ಬೀಗಲು ಎದುರುನೋಡುತ್ತಿದೆ.

ಕಳೆದ ಪಂದ್ಯದಲ್ಲಿ ಕೇವಲ 6 ರನ್​ಗಳಿಂದ ಸೋತ ಸಿಎಸ್​ಕೆ, ಎರಡನೇ ಪಂದ್ಯದಲ್ಲಿ ಆರ್​ಸಿಬಿ ಎದುರು 50 ರನ್​ಗಳ ಅಂತರದಲ್ಲಿ ಸೋತು, ತವರಿನಲ್ಲೇ ಭಾರೀ ಮುಖಭಂಗ ಅನುಭವಿಸಿತು. ಇದರಿಂದ ತೀವ್ರ ಕಂಗೆಟ್ಟ ಸಿಎಸ್​ಕೆ, ಮುಂಬರುವ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಹಪಾಹಪಿಯಲ್ಲಿದೆ. ಇದು ಅಭಿಮಾನಿಗಳ ಆಶಯ ಕೂಡ ಹೌದು. ಆದರೆ, ಈಗ ಗೆಲುವಿಗಿಂತ ಹೆಚ್ಚಾಗಿ ಮತ್ತೊಂದು ಖುಷಿ ಹಾಗೂ ಅಭಿಮಾನದ ಸಂಗತಿ ಚೆನ್ನೈ ತಂಡದ ಅಭಿಮಾನಿಗಳಿಗೆ ಕಾಡುತ್ತಿದೆ. ಅದು 'ಕ್ಯಾಪ್ಟನ್​ ಕೂಲ್' ವಿಶೇಷ ಎಂಟ್ರಿಗೆ.

ಇಂದು (ಏ.05) ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಿಕೆಟ್ ದಂತಕಥೆ, ಮಹೇಂದ್ರ ಸಿಂಗ್ ಧೋನಿ ಮತ್ತೆ ಸಿಎಸ್​ಕೆ ತಂಡದ ಕ್ಯಾಪ್ಟನ್ ಆಗಿ ವಾಪಾಸ್​ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಗಾಯದಿಂದ ಬಳಲುತ್ತಿರುವ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್​ ಮುಂಬರುವ ಪಂದ್ಯಗಳಲ್ಲಿ ತಂಡದಲ್ಲಿ ಅಲಭ್ಯವಿರುವ ಹಿನ್ನೆಲೆ ಧೋನಿ ಅವರೇ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂಬ ಮಾತುಗಳು ಮೂಲಗಳಿಂದ ಕೇಳಿಬಂದಿವೆ.

ಆದರೆ, ಇದೆಷ್ಟು ನಿಜ ಎಂಬುದು ಇನ್ನೂ ಖಚಿತವಾಗಿಲ್ಲ. ಕಾರಣ, ಈ ಕುರಿತು ಫ್ರಾಂಚೈಸಿ ಯಾವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಫ್ಯಾನ್ಸ್​ಗಳಲ್ಲಿ ತೀವ್ರ ಕುತೂಹಲ ಹೆಚ್ಚಾಗಿದ್ದು, ಮತ್ತೊಮ್ಮೆ ತಮ್ಮ ನೆಚ್ಚಿನ ದಿಗ್ಗಜನನ್ನು ಕ್ಯಾಪ್ಟನ್ ಆಗಿ ನೋಡುವ ತವಕವನ್ನು ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net