

ಮೀರತ್: ಶಿಕ್ಷಕರೆಂದರೆ ಗೌರವ, ಭಯ ಭಕ್ತಿ ಎಲ್ಲವೂ ಇರುತ್ತದೆ. ಆದರೆ ಅದೇ ಶಿಕ್ಷಕ ತನ್ನ ಕೆಲಸ ಬಿಟ್ಟು ವಿದ್ಯಾರ್ಥಿಗಳೊಂದಿಗೆ ಬೇರೆಯ ರೀತಿಯಲ್ಲಿ ನಡೆದುಕೊಳ್ಳಲು ಆರಂಭಿಸಿದರೆ? ಪರೀಕ್ಷೆಯೊಂದಕ್ಕೆ ತಯಾರಾಗಲು ಪ್ರಾಧ್ಯಾಪಕರ ಸಹಾಯ ಕೇಳಿದ ವಿದ್ಯಾರ್ಥಿನಿ ಜತೆ ಪ್ರಾಧ್ಯಾಪಕ ಅಸಭ್ಯವಾಗಿ ಮೆಸೇಜ್ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಮೀರತ್ನಲ್ಲಿರುವ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ (ಸಿಸಿಎಸ್ಯು) ಪ್ರಾಧ್ಯಾಪಕರೊಬ್ಬರು ಎಂ.ಫಿಲ್ ವಿದ್ಯಾರ್ಥಿನಿ ಜತೆ ಮಾಡಿರುವ ವಾಟ್ಸ್ಆ್ಯಪ್ ಚಾಟ್ ವೈರಲ್ ಆಗಿದೆ. "ನಿನ್ನ ಮೂಗು ಚಂದವಿದೆ. ನಿನ್ನಂತ ಸುಂದರ ಯುವತಿಯೊಂದಿಗಿನ ಸ್ನೇಹವನ್ನು ಯಾರು ನಿರಾಕರಿಸುತ್ತಾರೆ? ನಿನ್ನ ಡಿಪಿ ಚೇಂಜ್ ಮಾಡು. ನೀನು ಒಂಚೂರು ತೆಳ್ಳಗಾಗಬೇಕು. ನೀನು ದಪ್ಪವಿದ್ದರೂ ತುಂಬಾ ಸುಂದರವಾಗಿ ಕಾಣ್ತೀಯ. ನಿನ್ನ ಉದ್ದ ಮೂಗು ಎಂತರನ್ನಾದರೂ ಆಕರ್ಷಿಸುತ್ತದೆ" ಎಂದು ಪ್ರಾಧ್ಯಾಪಕ ಯುವತಿಗೆ ಮೆಸೇಜ್ ಮಾಡಿದ್ದಾನೆ.
ಅವಿವಾಹಿತ ಪ್ರಾಧ್ಯಾಪಕ ತನ್ನ ಬಳಿ ಪರೀಕ್ಷೆಗಳಲ್ಲಿ ಪಾಸ್ ಆಗಲು ಸಹಾಯ ಕೇಳಿ ಬರುವ ವಿದ್ಯಾರ್ಥಿನಿಯರೊಂದಿಗೆ ಇದೇ ರೀತಿ ಹಲವು ಬಾರಿ ವರ್ತಿಸಿರುವುದಾಗಿ ಅನೇಕರು ಆರೋಪಿಸಿದ್ದಾರೆ. ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆ ಬಾಲಾಜಿ ಅವರಿಗೂ ವಿಚಾರ ತಲುಪಿದ್ದು, ಈ ವಿಚಾರವಾಗಿ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಅವರು ಸಿಸಿಎಸ್ಯು ಗೆ ಕೋರಿದ್ದಾರೆ. (ಏಜೆನ್ಸೀಸ್)