

ಸಾಗರ: ತಾಲೂಕಿನ ಹೊನ್ನೆಸರದ ಶ್ರಮಜೀವಿ ಆಶ್ರಮದಲ್ಲಿ ಭೀಮನಕೋಣೆ ಕವಿ-ಕಾವ್ಯ ಟ್ರಸ್ಟ್ ಮತ್ತು ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಫೆ.15 ಮತ್ತು 16ರಂದು ಚರಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮೀ ಹೇಳಿದರು
15ರಂದು ಸಂಜೆ 6.30ಕ್ಕೆ ರಾಜ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅರುಣ್ ಚಕ್ರವರ್ತಿ ಕಾರ್ಯಕ್ರಮ ಉದ್ಘಾಟಿಸುವರು. ಡಿಸಿ ಗುರುದತ್ತ ಹೆಗಡೆ, ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ, ಭೀಮನಕೋಣೆ ಗ್ರಾಪಂ ಅಧ್ಯಕ್ಷ ಎಂ.ಎಸ್.ನಾಗರಾಜ್ ಭಾಗವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಜೆ 7ಕ್ಕೆ ಜೀವನ್ಮುಖಿ ತಂಡದಿಂದ ಚೌಡಿಕೆ ಕುಣಿತ, ನಂತರ ಮೈಸೂರಿನ ನಟನ ಪಯಣ ತಂಡದಿಂದ ಚೋರ ಚರಣದಾಸ ನಾಟಕ ಪ್ರದರ್ಶನವಾಗಲಿದೆ. 16ರಂದು ಬೆಳಗ್ಗೆ 10.30ಕ್ಕೆ ಹವಾಮಾನ ವೈಪರೀತ್ಯ ಮತ್ತು ಸುಸ್ಥಿರ ಬದುಕು ಕುರಿತ ವಿಚಾರ ಸಂಕಿರಣವನ್ನು ಪರಿಸರ ವಿಜ್ಞಾನಿ ಪ್ರಸನ್ನ ಆಡುವಳ್ಳಿ ಉದ್ಘಾಟಿಸುವರು. ಸಂವಾದದಲ್ಲಿ ಸಹಜ ಕೃಷಿಕ ಸೀತಾರಾಮ ಕುರುವರಿ, ರೈತ ಮಹಿಳೆ ಪೂರ್ಣಿಮಾ, ವಿನ್ಯಾಸ ತಜ್ಞ ಶ್ರೀಧರ ಕಲ್ಲಹಳ್ಳ ಭಾಗವಹಿಸುವರು ಎಂದರು.
ಸಂಜೆ 6.30ಕ್ಕೆ ಕಾಯಕ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶಸ್ತಿ ಪ್ರದಾನ ಮಾಡುವರು. ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ್, ಹೆಗ್ಗೋಡು ಗ್ರಾಪಂ ಅಧ್ಯಕ್ಷ ಎ.ಎಂ.ಧರ್ಮಪ್ಪ ಪಾಲ್ಗೊಳ್ಳುವರು. ಸಂಜೆ 7.30ಕ್ಕೆ ಚರಕ ಸಂಘದ ಸದಸ್ಯರಿಂದ ಹಳ್ಳಿ ಹೈದರ ಫ್ಯಾಷನ್ ಶೋ ವಿಶೇಷ ಕಾರ್ಯಕ್ರಮ ನಡೆಯಲಿದೆ. ನಂತರ ಮಾಳಕೋಡ್ ಯಕ್ಷಪಲ್ಲವಿ ಟ್ರಸ್ಟ್ ಮಂಡಳಿಯಿಂದ ‘ಮಹೇಂದ್ರ ಶಪಥ’ ಪೌರಾಣಿಕ ಯಕ್ಷಗಾನ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.
10 ಮಂದಿಗೆ ಪ್ರಶಸ್ತಿ: ಕಳೆದ 21 ವರ್ಷಗಳಿಂದ ಚರಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಬಾರಿ ಕಾಯಕ ಪ್ರಶಸ್ತಿಯನ್ನು ಬಸವರಾಜ ಬೆಳವಿ ಮಹಾಲಿಂಗಪುರ, ಅನಿತಾ ಹೆಬ್ಬರಿಗೆ, ರಾಮಚಂದ್ರ ಎಚ್.ಟಿ. ಹೊಸಕೊಪ್ಪ, ಲತಾ ಬಿ. ಕೆರೆಕೊಪ್ಪ ಅವರಿಗೆ ನೀಡಲಾಗುತ್ತಿದೆ. ಗುಂಪು ಕಾಯಕ ಪ್ರಶಸ್ತಿಯನ್ನು ಕಲಾವತಿ ಬೆಂಗಳೂರು, ಶಿಲ್ಪಾ ಎಂ. ಬೆಂಗಳೂರು, ಲಕ್ಷ್ಮೀ ಬಿ.ಎಲ್. ಬೆಂಗಳೂರು, ವಿದ್ಯಾ ಎಂ. ಬೆಂಗಳೂರು, ಐಶ್ವರ್ಯಾ ಡಿ. ರಾಜ್ ಬೆಂಗಳೂರು ಮತ್ತು ಲಕ್ಷ್ಮೀ ಬೆಂಗಳೂರು ಇವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ಚರಕ ಕಾರ್ಯದರ್ಶಿ ರಮೇಶ್ ತಿಳಿಸಿದರು.
ಜಿ.ಇಂದುಕುಮಾರ್, ಗಿರಿಜಾ, ಚಂದ್ರಕಲಾ ಸುದ್ದಿಗೋಷ್ಠಿಯಲ್ಲಿದ್ದರು.