ರಾಜ್ಯ ಸರ್ಕಾರ - ಕೇಂದ್ರ ಸಚಿವ ಎಚ್ಡಿಕೆ ನಡುವೆ ನೇರ ಹೋರಾಟ > ಊಹೆಗೂ ನಿಲುಕದ ಫಲಿತಾಂಶ ಸಾಧ್ಯತೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ವಿಜಯದ ನಗೆ ಬೀರಲು ರಾಜಕೀಯ ಪಕ್ಷಗಳು ನಡೆಸುತ್ತಿರುವ ಬೊಂಬೆಯಾಟ ಕುತೂಹಲ ಘಟ್ಟಕ್ಕೆ ತಲುಪಿದೆ.
ಕ್ಷೇತ್ರದಲ್ಲಿ ನೀರು - ಕಣ್ಣೀರು, ಸ್ವಾಭಿಮಾನದ ಅಸ್ತ್ರ ಬಳಕೆ ಮಾಡುತ್ತ ಕುಸ್ತಿಗೆ ಇಳಿದಿರುವ ಜಟ್ಟಿಗಳು ಮೇಲ್ನೋಟಕ್ಕೆ ತಮ್ಮದೇ ಗೆಲುವು ಎಂದು ಬೀಗುತ್ತಿದ್ದರೂ ಮತದಾರರ ಮನ ಅರಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆರಂಭದಲ್ಲಿ ಗೆಲುವು ನಮ್ಮ ಪರ ಎಂದು ಬೀಗುತ್ತಿದ್ದ ಆಡಳಿತಾರೂಢ ಕಾಂಗ್ರೆಸ್ಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಪ್ರಚಾರದ ಕಣಕ್ಕೆ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ, ಮಾಜಿ ಸಿಎಂ ಬಿ. ಎಸ್.ಯಡಿಯೂರಪ್ಪ ಪ್ರವೇಶ ಎನ್ಡಿಎ ಪಾಳಯಕ್ಕೆ ಶಕ್ತಿ ತುಂಬಿದ್ದರೆ, ಅತ್ತ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಉಸ್ತುವಾರಿಯಲ್ಲಿಯೇ ಚುನಾವಣೆ ನಡೆಸುತ್ತಿದ್ದು, ಪ್ರಚಾರ ಕಣಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿರುವುದು ಕೈ ಪಡೆಗೆ ಆನೆ ಬಲ ತರಿಸಿದೆ.
ಆರಂಭದಲ್ಲಿ ಸಿ.ಪಿ.ಯೋಗೇಶ್ವರ್ ಮತ್ತು ನಿಖಿಲ್ ನಡುವಿನ ಸ್ಪರ್ಧೆಯಂತಿದ್ದ ಕಣ, ಈಗ ರಾಜ್ಯ ಸರ್ಕಾರ ಮತ್ತು ಕುಮಾರಸ್ವಾಮಿ ನಡುವಿನ ಜಂಗೀ ಕುಸ್ತಿಯ ಅಖಾಡವಾಗಿದೆ.
ಎನ್ಡಿಎ ಮತ್ತು ಕಾಂಗ್ರೆಸ್ ಎರಡೂ ಕಡೆಯಿಂದಲೂ ಬೂತ್ಮಟ್ಟದಿಂದಲೇ ಮತದಾರರನ್ನು ಸೆಳೆಯಲು ಪ್ರಮುಖ ನಾಯಕರನ್ನು ನಿಯೋಜನೆ ಮಾಡಲಾಗಿದ್ದು, ರಾಜ್ಯಮಟ್ಟದ ನಾಯಕರ ಜತೆಗೆ ಹೊರ ಜಿಲ್ಲೆಗಳ ಕಾರ್ಯಕರ್ತರೂ ಪ್ರಚಾರ ಕಣಕ್ಕೆ ಇಳಿದಿರುವುದು ಚುನಾವಣೆ ರಂಗೇರುವಂತೆ ಮಾಡಿದೆ.
ಸಿ.ಪಿ.ಯೋಗೇಶ್ವರ್ ಮತ್ತು ನಿಖಿಲ್ ಕಳೆದ ಎರಡೂ ಚುನಾವಣೆಗಳಲ್ಲಿ ಸತತ ಸೋಲು ಕಂಡಿದ್ದಾರೆ. ಈ ಚುನಾವಣೆಯಲ್ಲಿ ಇಬ್ಬರಿಗೂ ಗೆಲುವು ಅನಿವಾರ್ಯ. ಆದರೆ, ಕ್ಷೇತ್ರದಲ್ಲಿ ಪ್ರಸ್ತುತ ಸನ್ನಿವೇಶ ಗೆಲುವಿನ ಗ್ಯಾರಂಟಿ ಯಾರಿಗೆ ಎನ್ನುವ ಸ್ಪಷ್ಟ ಚಿತ್ರಣ ನೀಡುತ್ತಿಲ್ಲ. ತಮ್ಮದೇ ಗೆಲುವು ಎಂದು ಇಬ್ಬರೂ ಅಬ್ಬರಿಸುತ್ತಿದ್ದರೂ ವಿಜಯಮಾಲೆ ಯಾರಿಗೆ ಎಂದು ಅರಿಯುವುದು ಸದ್ಯಕ್ಕಂತೂ ಕಷ್ಟ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲುವಿಗೆ ಪ್ರಮುಖ ಕಾರಣ ಮುಸ್ಲಿಂ ಮತದಾರರು. ಗ್ರಾಮೀಣ ಭಾಗದಲ್ಲಿ ಬಹುತೇಕ ಕಡೆಗಳಲ್ಲಿ ಯೋಗೇಶ್ವರ್, ಕುಮಾರಸ್ವಾಮಿ ಅವರಿಗೆ ಸಮಬಲದ ಹೋರಾಟ ನೀಡಿದ್ದರು. ನಗರ ಪ್ರದೇಶದ ಹಲವು ಕಡೆಗಳಲ್ಲಿಯೂ ಸಿಪಿವೈ ಮುನ್ನಡೆ ಸಾಧಿಸಿದ್ದರು. ಆದರೆ ಮುಸ್ಲಿಂ ಮತದಾರರು ಕುಮಾರಸ್ವಾಮಿ ಕೈ ಹಿಡಿದರು. ಈ ಮತಗಳ ಮಹತ್ವವನ್ನು ಚೆನ್ನಾಗಿಯೇ ಅರಿತಿರುವ ಎಚ್ಡಿಕೆ, ಸಾಧ್ಯ ಇರುವ ಎಲ್ಲ ಮಾರ್ಗಗಳ ಮೂಲಕ ಮುಸ್ಲಿಂ ಮತಗಳ ಓಲೈಕೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಇವರಿಗೆ ನಿಖಿಲ್ ಎನ್ಡಿಎ ಅಭ್ಯರ್ಥಿ ಎಂಬುದು ಅಡ್ಡಿಯಾಗಿದೆ. ಎಸ್ಡಿಪಿಐ ಅಭ್ಯರ್ಥಿ ಸೇರಿ ಕಣದಲ್ಲಿರುವ ಕೆಲ ಮುಸ್ಲಿಂ ಸ್ಪರ್ಧಿಗಳು ಕಾಂಗ್ರೆಸ್ ನಿದ್ದೆಗೆಡಿಸಿದ್ದಾರೆ. ಒಂದು ವೇಳೆ ಇವರು ಹೆಚ್ಚಿನ ಮತ ಪಡೆದುಕೊಂಡಿದ್ದೇ ಆದರೆ, ಕೈ ಪಾಳಯದ ಲೆಕ್ಕಾಚಾರ ಉಲ್ಟಾ ಆಗಲಿದೆ.
ಚನ್ನಪಟ್ಟಣದ ಪ್ರತಿ ಚುನಾವಣೆ ಪ್ರಚಾರದ ಅಸ್ತ್ರ ನೀರಿನಿಂದ ಆರಂಭಗೊಂಡು, ಕಣ್ಣೀರಿಗೆ ತಲುಪುತ್ತದೆ. ಈ ಬಾರಿಯೂ ಇದರಿಂದ ಹೊರತಾಗಿಲ್ಲ. ಕೆರೆಗೆ ನೀರು ತುಂಬಿಸಿದ್ದು ಯೋಗೇಶ್ವರ್ ಎಂದು ಕಾಂಗ್ರೆಸ್ ಹೇಳುತ್ತಿದ್ದರೆ, ಇಗ್ಗಲೂರು ಬ್ಯಾರೇಜ್ ಕಟ್ಟಸಿದ್ದೇ ನಾನು, ಅದು ಇಲ್ಲದಿದ್ದರೆ ಹೇಗೆ ನೀರು ತರುತ್ತಿದ್ದರು? ಎಂದು ದೊಡ್ಡ ಗೌಡರು ಅಬ್ಬರಿಸುತ್ತಿದ್ದಾರೆ. ಅತ್ತ ಕುಮಾರಸ್ವಾಮಿ ಸಹ 17 ಕೆರೆ ತುಂಬಿಸಿದವರು ಭಗೀರಥರಾದರೆ, ನಾನು 107 ಕೆರೆ ತುಂಬಿಸಿಲ್ಲವೇ? ಎಂದು ಕುಟುಕುತ್ತಿದ್ದಾರೆ. ಇನ್ನು ಗೌಡರ ಕುಟುಂಬ ಕಣ್ಣೀರು ಹಾಕಿ ಮತ ಕೇಳುತ್ತದೆ ಎಂದು ಕಾಂಗ್ರೆಸ್ ಕಾಲೆಳೆಯುತ್ತಿದ್ದು, ಕಲ್ಲು ಹೃದಯವರಿಗೆ ಕಣ್ಣೀರು ಬರಲ್ಲ ಎಂದು ಗೌಡರು ಮಾತಿನ ಗುದ್ದು ನೀಡುತ್ತಿದ್ದಾರೆ.
ಕ್ಷೇತ್ರದಲ್ಲಿ 1,12,271 ಪುರುಷ, 1,20,557 ಮಹಿಳೆಯರು ಸೇರಿ 2,32,836 ಮತದಾರರಿದ್ದಾರೆ. ಒಕ್ಕಲಿಗ ಸಮುದಾಯದ ಸುಮಾರು 1.2 ಲಕ್ಷ ಮತಗಳಿದ್ದು, ಇವು ಎರಡೂ ಪಕ್ಷಗಳ ಪಾಲಿಗೆ ಹಂಚಿಕೆ ಆಗುವ ದೊಡ್ಡ ವೋಟ್ ಬ್ಯಾಂಕ್. ಇದರ ಹೊರತಾಗಿ 10&15 ಸಾವಿರ ಮತಗಳನ್ನು ಹೊಂದಿರುವ ಕುರುಬ, ಲಿಂಗಾಯತ, ಬೆಸ್ತ, ತಿಗಳ ಸಮುದಾಯಗಳು, ಸುಮಾರು 40 ಸಾವಿರ ಇರುವ ಎಸ್ಸಿ&ಎಸ್ಟಿ ಹಾಗೂ 25 ಸಾವಿರಕ್ಕಿಂತ ಹೆಚ್ಚಿರುವ ಮುಸ್ಲಿಂ ಮತಗಳ ಮೇಲೆ ಅಭ್ಯರ್ಥಿಗಳ ಕಣ್ಣು ಬಿದ್ದಿದೆ. ಈ ಮತಗಳ ಕ್ರೋಡಿಕರಣಕ್ಕಾಗಿ ಕಾಂಗ್ರೆಸ್ ಮತ್ತು ಎನ್ಡಿಎ ಆಯಾ ಸಮುದಾಯಗಳ ನಾಯಕರನ್ನು ಕರೆತಂದು ಸೈಲೆಂಟ್ ಆಪರೇಷನ್ ನಡೆಸುತ್ತಿವೆ.
ಕಾಂಗ್ರೆಸ್ನಿಂದ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಸೇರಿ 31 ಮಂದಿ ಅಂತಿಮ ಕಣದಲ್ಲಿದ್ದಾರೆ. ಎಸ್ಡಿಪಿಐನಿಂದ ಮೊಹದಮ್ ಾಝಿಲ್ ಜತೆಗೆ ಮಾನ್ಯತೆ ಪಡೆದ ಹಾಗೂ ಪಡೆಯದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರೊಂದಿಗೆ 21 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ.
===
2018 ಚುನಾವಣೆ ಫಲಿತಾಂಶ
ಹೆಸರು ಪಕ್ಷ ಮತಗಳು
ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ 87,995
ಸಿ.ಪಿ ಯೋಗೇಶ್ವರ್ ಬಿಜೆಪಿ 66,465
ಎಚ್.ಎಂ.ರೇವಣ್ಣ ಕಾಂಗ್ರೆಸ್ 30,208
2023 ವಿಧಾನಸಭೆ ಚುನಾವಣೆ
ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ 96,592
ಸಿ.ಪಿ.ಯೋಗೇಶ್ವರ್ ಬಿಜೆಪಿ 80,677
ಎಸ್.ಗಂಗಾಧರ್ ಕಾಂಗ್ರೆಸ್ 15,374