ಜಿನ್ನೇನಹಳ್ಳಿಯಲ್ಲಿ ಸಂಭ್ರಮದ ಚನ್ನಕೇಶವಸ್ವಾಮಿ ಉತ್ಸವ

15 HRS 01
Published on

ಹಿರೀಸಾವೆ: ಹೋಬಳಿಯ ಜಿನ್ನೇನಹಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಚನ್ನಕೇಶವ ಸ್ವಾಮಿ ಉತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ನಡೆಯಿತು.


ಮಂಗಳವಾರ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡವು. ವಿಘ್ನೇಶ್ವರ ಹಾಗೂ ಗಂಗಾಪೂಜೆ ಜರುಗಿದ ಬಳಿಕ ದೇಗುಲಕ್ಕೆ ಹೂವಿನ ಚಪ್ಪರ ಹಾಕಲಾಯಿತು. ಗ್ರಾಮದ ಎಲ್ಲ ದೇಗುಲಗಳು ಹಾಗೂ ಪ್ರಮುಖ ಬೀದಿಗಳು ಸೇರಿದಂತೆ ಗ್ರಾಮದಿಂದ ಮುಖ್ಯ ರಸ್ತೆಯ ಗೇಟ್‌ವರೆಗೂ ಬಾಳೆಕಂದು ಕಟ್ಟಿ ತಳಿರು-ತೋರಣಗಳಿಂದ ಸಿಂಗರಿಸಿದ್ದು ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಂಜೆ 7.30ರಲ್ಲಿ ಶ್ರೀ ಚನ್ನಕೇಶವಸ್ವಾಮಿ ಮೂರ್ತಿಯ ಉತ್ಸವವು ಮಂಗಳವಾದ್ಯದೊಂದಿಗೆ ಅರಂಭಗೊಂಡು ಪ್ರಮುಖ ಬೀದಿಯಲ್ಲಿ ಸಾಗಿತು. ಉತ್ಸವದಲ್ಲಿ ಹಿರಿಯರು ಚನ್ನಕೇಶವನ ಮೇಲಿನ ಪದ ಹಾಡಿದರೆ ದೇವರಿಗೆ ಪ್ರಿಯವಾದ ಕೋಡಂಗಿ ಕುಣಿತ ನೋಡುಗರ ಗಮನ ಸೆಳೆಯಿತು.


ಚನ್ನಕೇಶವ ಸ್ವಾಮಿಯ ಉತ್ಸವವು ಬೀದಿಗಳಲ್ಲಿ ಸಾಗಿದಂತೆ ಮನೆಯ ಮುಂದೆ ಭಕ್ತರು ಪೂಜೆ ಸಲ್ಲಿಸಿದರು. ಉತ್ಸವದಲ್ಲಿ ಸ್ವಾಮಿಗೆ ಪ್ರಿಯವಾದ ಮದ್ದು-ಗುಂಡಿನ ಸೇವೆ ನಡೆಯಿತು. ಹೆಣ್ಣು ಮಕ್ಕಳು ಬಾಯಿಬೀಗ ಹಾಕಿಸಿಕೊಂಡು ಆರತಿ ಹಿಡಿದು ಉತ್ಸವದೊಂದಿಗೆ ಸಾಗಿದರು.


ಬುಧವಾರ ಬೆಳಗಿನ ಉತ್ಸವ 6.30 ರಲ್ಲಿ ಪ್ರಾರಂಭಗೊಂಡು ಮಾಕನಹಳ್ಳಿ, ಜಿನ್ನೇನಹಳ್ಳಿ ಕೊಪ್ಪಲು ಹಾಗೂ ಮಾಚಕ ಬೂವನಹಳ್ಳಿಗೆ ಉತ್ಸವದೊಂದಿಗೆ ದೇವರನ್ನು ಕರೆದೊಯ್ಯಲಾಯಿತು. ಮೂರು ಗ್ರಾಮಗಳಲ್ಲೂ ದೇವರಿಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ಜಿನ್ನೇನಹಳ್ಳಿ ಗ್ರಾಮಕ್ಕೆ ಉತ್ಸವ ಆಗಮಿಸಿದ ಬಳಿಕ ಮಂಟಪಕ್ಕೆ ಸೂರಹಣ್ಣು ಎಸೆಯುವ ಕಾರ್ಯಕ್ರಮ ನಡೆಯಿತು. ಮಹಾ ಮಂಗಳಾರತಿ ಮುಗಿದ ಬಳಿಕ ಪ್ರಸಾದ ವಿನಿಯೋಗ ನಡೆಯಿತು. ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net