

ಬೆಂಗಳೂರು: ಎಟಿಎಂ ಬೂತ್‌ಗೆ ಹಣ ಡ್ರಾ ಮಾಡಲು ಬಂದ ನಿವೃತ್ತ ಅಧಿಕಾರಿಗೆ ಸಹಾಯ ಮಾಡುವ ನೆಪದಲ್ಲಿ ಬಂದ ವ್ಯಕ್ತಿ, ಡೆಬಿಟ್ ಕಾರ್ಡ್ ಬದಲಾಯಿಸಿ 22 ಸಾವಿರ ರೂ. ದೋಚಿದ್ದಾನೆ.
ಜೆ.ಪಿ.ನಗರದ ಆರ್‌ಬಿಎಲ್ ಲೇಔಟ್ ನಿವಾಸಿ ಧರ್ಮರಾಜು ಮೋಸಕ್ಕೆ ಒಳಗಾದವರು. ಕೆಲ ದಿನಗಳ ಹಿಂದೆ ಆರ್‌ಬಿಐ ಲೇಔಟ್‌ನಲ್ಲಿ ಇರುವ ಕೆರನಾ ಬ್ಯಾಂಕ್ ಎಟಿಎಂಗೆ ಹಣ ಡ್ರಾ ಮಾಡಲು ಹೋಗಿದ್ದಾರೆ. ಹಣ ಡ್ರಾ ಮಾಡುವಾಗ ತಾಂತ್ರಿಕ ಸಮಸ್ಯೆಯಾಗಿ ಹಣ ಬಂದಿಲ್ಲ. ಅಲ್ಲಿಯೇ ಇದ್ದ ಅಪರಿಚಿತ ವ್ಯಕ್ತಿ, ಹಣ ಡ್ರಾ ಮಾಡಿಕೊಡುವುದಾಗಿ ಹೇಳಿ ಡೆಬಿಟ್ ಕಾರ್ಡ್ ಪಡೆದುಕೊಂಡಿದ್ದಾನೆ. ಮಿಷನ್ ಒಳಗೆ ಕಾರ್ಡ್ ಹಾಕಿ ವಾಪಸ್ ತೆಗೆದುಕೊಟ್ಟು ಹಣ ಬರುತ್ತಿಲ್ಲ ಎಂದು ಹೇಳಿದ್ದಾನೆ. ಅಲ್ಲಿಂದ ಧರ್ಮರಾಜ್ ಹೊರಟ್ಟಿದ್ದು, ಕೆಲ ಹೊತ್ತಿನಲ್ಲೇ ಅವರ ಬ್ಯಾಂಕ್ ಖಾತೆಯಿಂದ 4300 ರೂ. ಕಡಿತವಾಗಿದೆ.
ಈ ಬಗ್ಗೆ ಬ್ಯಾಂಕಿಗೆ ಹೋಗಿ ದೂರುದಾರರು ವಿಚಾರಿಸಿದಾಗ 10 ಸಾವಿರ ರೂ. ಒಮ್ಮೆ ಮತ್ತು 7,900 ರೂ. ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಆಗ ಎಟಿಎಂ ಬೂತ್‌ನಲ್ಲಿ ಸಿಕ್ಕ ಅಪರಿಚಿತ ವ್ಯಕ್ತಿ, ತನ್ನ ಕಾರ್ಡ್ ಬದಲಾಯಿಸಿ ವಂಚನೆ ಮಾಡಿರುವುದು ಮನವರಿಕೆಯಾಗಿದೆ. ಕೊನೆಗೆ ಕೋಣನಕುಂಟೆ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.