

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಇಂದು ಇನ್ನೊಂದು ಮಹತ್ವದ ಮಜಲನ್ನು ತಲುಪಿದೆ. ಈ ಕುರಿತು ಇಸ್ರೋದ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಚಂದ್ರಯಾನ-3 ಇಂದು ರಾತ್ರಿ 7.15 ನಿಮಿಷಕ್ಕೆ ಸರಿಯಾಗಿ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಸೇರಿಕೊಂಡಿದೆ ಎಂಬುದಾಗಿ ಇಸ್ರೋ, ಆ ಕುರಿತ ಫೋಟೋವೊಂದರ ಸಹಿತ ಮಾಹಿತಿ ಹಂಚಿಕೊಂಡಿದೆ.
ಚಂದ್ರಯಾನ-3ಗೆ ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್ಎಲ್ವಿ ಮಾರ್ಕ್ 3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಕೂರಿಸಿ ಅದಕ್ಕೆ ಲಾಂಚ್ ವೆಹಿಕಲ್ ಮಾರ್ಕ್ 3 (LM-3) ಎಂದು ಮರುನಾಮಕರಣ ಮಾಡಲಾಗಿತ್ತು.
ಚಂದ್ರಯಾನ-3ರ ಈ ಬಾಹ್ಯಾಕಾಶ ನೌಕೆಯನ್ನು ಜುಲೈ 14ರಂದು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ಚಂದ್ರಯಾನ-3 ಆಗಸ್ಟ್ 23ರಂದು ಪೂರ್ಣಗೊಳ್ಳಲಿದೆ. ಮೊದಲ ಚಂದ್ರಯಾನ 2008ರಲ್ಲಿ ನಡೆದಿದ್ದು, ಚಂದ್ರಯಾನ-2 2019ರಲ್ಲಿ ಆಗಿತ್ತು.