ಕನ್ನಡ ನೆಲದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಚಂದ್ರಬಾಬು ನಾಯ್ಡು! ಡಾ. ರಾಜ್ ನೆನಪಾಗಲಿಲ್ಲವೇ?

chandrababu naydu
Published on

ಬಳ್ಳಾರಿ: ಬಳ್ಳಾರಿಗೆ ಪ್ರತಿಮೆ ಅನಾವರಣ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಚಂದ್ರಬಾಬು ನಾಯ್ಡು ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಹೇಳಿಕೆಗೆ ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು ಡಾ. ರಾಜ್ ನೆನಪಾಗಲಿಲ್ಲವೇ ಎಂಬ ಪ್ರಶ್ನೆಗಳು ಎದ್ದಿವೆ.

ಬಳ್ಳಾರಿಯಲ್ಲಿ ಖ್ಯಾತ ನಟ ಎನ್.ಟಿ. ರಾಮರಾವ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ವಿಪಕ್ಷ ನಾಯಕ ಚಂದ್ರಬಾಬು ನಾಯ್ಡುರನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭ ತಮ್ಮ ಭಾಷಣದಲ್ಲಿ ಚಂದ್ರಬಾಬು ನಾಯ್ಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತಮ್ಮ ಭಾಷಣದಲ್ಲಿ ಅವರು, “ಪೌರಾಣಿಕ ಪಾತ್ರಗಳಲ್ಲಿ ಎನ್‌.ಟಿ.ಆರ್‌. ಬಿಟ್ಟರೆ ಬೇರೆ ಯಾರೂ ಇಲ್ಲ” ಎಂದಿದ್ದಾರೆ. ಇದರಿಂದಾಗಿ ಕನ್ನಡಿಗರು ಸಿಟ್ಟಾಗಿದ್ದು, “ಕರ್ನಾಟಕಕ್ಕೆ ಬಂದಾಗ ಡಾ. ರಾಜ್‌ ನೆನಪಾಗುವುದಿಲ್ಲವೇ? ಡಾ. ರಾಜ್‌ಕುಮಾರ್ ಪೌರಾಣಿಕ ಪಾತ್ರಗಳನ್ನು ಮಾಡಿರಲಿಲ್ಲವೇ?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಈ ವೇಳೆ ಕನ್ನಡ ನೆಲದಲ್ಲಿ ಎನ್‌ಟಿಆರ್ ಪ್ರತಿಮೆ ಏಕೆ ಎಂಬ ಪ್ರಶ್ನೆಯೂ ಉದ್ಭವಿಸಿದ್ದು “ಬಳ್ಳಾರಿ ಇನ್ನೊಂದು ಬೆಳಗಾವಿ ಆಗಲಿದೆ” ಎಂದು ಕನ್ನಡಿಗರು ಎಚ್ಚರಿಕೆ ಕೊಟ್ಟಿದ್ದಾರೆ.

ಸದ್ಯ ಚಂದ್ರಬಾಬು ನಾಯ್ಡು ವಿರುದ್ದ ಜಾಲತಾಣಗಳಲ್ಲಿ ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಚಿವ ನಾಗೇಂದ್ರರಿಗೂ ಬಿಸಿ ತಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net