ಆಸಿಯಾನ್ ಶೃಂಗಸಭೆ | ಇಂಡೋನೇಷ್ಯಾದಲ್ಲಿ ಪ್ರಧಾನಿ ಮೋದಿಗೆ ಸಿಕ್ತು ಭರ್ಜರಿ ಸ್ವಾಗತ! ಅನಿವಾಸಿ ಭಾರತೀಯರು ಹೇಳಿದ್ದೇನು?

modi indonesia
Published on

ಇಂಡೋನೇಷ್ಯಾ (ಜಕಾರ್ತಾ): ಇಂಡೋನೇಷ್ಯಾದ ಜಕಾರ್ತಾದಲ್ಲಿ ಇಂದು (ಸೆ.7) ಮುಂಜಾನೆ ತೆರಳಿದ ಪ್ರಧಾನಿ ನರೇಂದ್ರ ಮೋದಿಗೆ ಭಾರತೀಯ ಸಮುದಾಯದಿಂದ ಭವ್ಯ ಸ್ವಾಗತ ದೊರೆಯಿತು.

ಜಕಾರ್ತಾದ ರಿಟ್ಜ್ ಕಾರ್ಲ್ಟನ್ ಹೋಟೆಲ್‍ನಲ್ಲಿ ನೆರೆದಿದ್ದ ಭಾರತೀಯ ವಲಸಿಗರು ಪ್ರಧಾನಿ ಮೋದಿಯನ್ನು 'ವಂದೇ ಮಾತರಂ' ಮತ್ತು 'ಮೋದಿ ಮೋದಿ' ಘೋಷಣೆಗಳ ನಡುವೆ ಸ್ವಾಗತಿಸಿದರು.

ಅನಿವಾಸಿ ಭಾರತೀಯರು ತ್ರಿವರ್ಣ ಧ್ವಜ ಬೀಸುತ್ತಾ "ಮೋದಿ ಮೋದಿ" ಮತ್ತು "ವಂದೇ ಮಾತರಂ", "ಹುಮಾರಾ ನೇತಾ ಕೈಸಾ ಹೋ, ನರೇಂದ್ರ ಮೋದಿಜಿ ಜೈಸಾ ಹೋ... (ನಮ್ಮ ನಾಯಕ ಹೇಗಿರಬೇಕು? ಮೋದಿಜಿಯಂತೆ ಇರಬೇಕು)" ಎಂದೆಲ್ಲಾ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಉತ್ಸಾಹವನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯರ ಅನೇಕ ಮಕ್ಕಳೂ ಹಾಜರಿದ್ದರು. ಪ್ರಧಾನಿ ಮೋದಿ, ಮಕ್ಕಳು ಸೇರಿದಂತೆ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಹನ ನಡೆಸುತ್ತಿರುವುದನ್ನು ಕಾಣಬಹುದು. ಪ್ರಧಾನಿ, ಜನರ ಜತೆಗೆ ಸೆಲ್ಫಿಗೆ ಪೋಸ್ ನೀಡಿದರು.

ಪ್ರಧಾನಿ ಬಗ್ಗೆ ಈ ಸಂದರ್ಭದಲ್ಲಿ ಅನೇಕ ಅನಿವಾಸಿ ಭಾರತೀಯರಲ್ಲಿ ಗೌರವ ಭಾವ ಉಂಟಾಗಿದ್ದು ಕೆಲವರು ಅಲ್ಲಿ ಹಾಜರಿದ್ದ ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ. ಓರ್ವ ಮಹಿಳೆ, "ಅವರು ಅಂತಹ ದೊಡ್ಡ ನಾಯಕ, ಆದರೆ ಅವರು ತುಂಬಾ ವಿನಮ್ರರಾಗಿ ಇದ್ದಾರೆ. ಅವರು ನಮ್ಮೆಲ್ಲರೊಂದಿಗೆ ಕೈಕುಲುಕಿದರು. ಯಾರೆಲ್ಲ ಅವರನ್ನು ಮಾತನಾಡಿಸಿದ್ದೇವೋ ಅವರಿಗೆಲ್ಲರಿಗೂ ಅವರು ಸಮಯ ನೀಡಿದರು..." ಎಂದು ಹೇಳಿದರು. ಇನ್ನೂ ಕೆಲವರು ಭಾರತ ಪ್ರಧಾನಿ ಮೋದಿಯ ಕಾರಣ ಮಾನ್ಯತೆ ಪಡೆಯುತ್ತಿದೆ ಎಂದು ಹೇಳಿದರು.

18ನೇ ಪೂರ್ವ ಏಷ್ಯಾ ಶೃಂಗಸಭೆ ಮತ್ತು 20ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇಂಡೋನೇಷ್ಯಾಕ್ಕೆ ಆಗಮಿಸಿದರು. ಜಕಾರ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅವರನ್ನು ಇಂಡೋನೇಷ್ಯಾದ ಮಹಿಳಾ ಸಬಲೀಕರಣ ಮತ್ತು ಮಕ್ಕಳ ರಕ್ಷಣಾ ಸಚಿವೆ ಐ. ಗುಸ್ತಿ ಆಯು ಬಿಂಟಾಂಗ್ ಧರ್ಮಾವತಿ ಸ್ವಾಗತಿಸಿದರು.

ಇಂಡೋನೇಷ್ಯಾದ ಸಾಂಸ್ಕೃತಿಕ ನೃತ್ಯವನ್ನು ಸಹ ಅಲ್ಲಿ ಪ್ರದರ್ಶಿಸಲಾಯಿತು. ಇದಕ್ಕೂ ಮುನ್ನ, ಬುಧವಾರ ಇಂಡೋನೇಷ್ಯಾಕ್ಕೆ ತೆರಳುವ ಮೊದಲು, ಪ್ರಧಾನಿ ಮೋದಿ ಹೇಳಿಕೆಯಲ್ಲಿ, ಜಾಗತಿಕ ಸವಾಲುಗಳನ್ನು ಸಾಮೂಹಿಕವಾಗಿ ಎದುರಿಸಲು ಪ್ರಾಯೋಗಿಕ ಸಹಕಾರ ಕ್ರಮಗಳ ಬಗ್ಗೆ ಇತರ ನಾಯಕರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಆಸಿಯಾನ್ ಗುಂಪಿನೊಂದಿಗಿನ ಒಪ್ಪಂದವು ಭಾರತದ 'ಆಕ್ಟ್ ಈಸ್ಟ್ ಪಾಲಿಸಿ'ಯ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಅವರು ಬಣ್ಣಿಸಿದರು. ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೋ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿಯವರು ಜಕಾರ್ತಾಗೆ ಭೇಟಿ ನೀಡುತ್ತಿದ್ದಾರೆ.

"ನನ್ನ ಮೊದಲ ಕಾರ್ಯಕ್ರಮ 20 ನೇ ಆಸಿಯಾನ್-ಭಾರತ ಶೃಂಗಸಭೆಯಾಗಿದೆ. ನಾಲ್ಕನೇ ದಶಕವನ್ನು ಪ್ರವೇಶಿಸಿರುವ ನಮ್ಮ ಪಾಲುದಾರಿಕೆಯ ಭವಿಷ್ಯದ ರೂಪುರೇಷೆಗಳ ಬಗ್ಗೆ ಆಸಿಯಾನ್ ನಾಯಕರೊಂದಿಗೆ ಚರ್ಚಿಸಲು ನಾನು ಎದುರು ನೋಡುತ್ತಿದ್ದೇನೆ. ಆಸಿಯಾನ್ ನೊಂದಿಗಿನ ಒಡನಾಟವು ಭಾರತದ 'ಆಕ್ಟ್ ಈಸ್ಟ್' ನೀತಿಯ ಪ್ರಮುಖ ಆಧಾರಸ್ತಂಭವಾಗಿದೆ. ಕಳೆದ ವರ್ಷ ಮಾಡಿಕೊಂಡ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯು ನಮ್ಮ ಬಾಂಧವ್ಯಕ್ಕೆ ಹೊಸ ಚೈತನ್ಯವನ್ನು ನೀಡಿದೆ" ಎಂದು ಪ್ರಧಾನಿ ಹೇಳಿದ್ದಾರೆ.

"ಅದರ ನಂತರ, ನಾನು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದೇನೆ. ಅಲ್ಲಿ ಆಹಾರ ಮತ್ತು ಇಂಧನ ಭದ್ರತೆ, ಪರಿಸರ, ಆರೋಗ್ಯ ಮತ್ತು ಡಿಜಿಟಲ್ ರೂಪಾಂತರ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಈ ವೇದಿಕೆ ಅವಕಾಶವನ್ನು ಒದಗಿಸುತ್ತದೆ. ಈ ಜಾಗತಿಕ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಪ್ರಾಯೋಗಿಕ ಸಹಕಾರ ಕ್ರಮಗಳ ಬಗ್ಗೆ ಇತರ ಇಎಎಸ್ ನಾಯಕರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ" ಎಂದು ಅವರು ಹೇಳಿದರು.

ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಜಿ 20 ಶೃಂಗಸಭೆಗೆ ಮುಂಚಿತವಾಗಿ ಪ್ರಧಾನಿ ಮೋದಿ ಗುರುವಾರ ಸಂಜೆ ನವದೆಹಲಿಗೆ ಮರಳಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net