

ನ್ಯೂಯಾರ್ಕ್: ಸೆರ್ಬಿಯಾ ತಾರೆ ನೋವಾಕ್ ಜೋಕೊವಿಕ್, ಆತಿಥೇಯ ಬೆನ್ ಶೆಲ್ಟನ್, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 19 ವರ್ಷದ ಕೋಕೋ ಗೌಫ್, 10ನೇ ಶ್ರೇಯಾಂಕಿತೆ ಕ್ಯಾರೊಲಿನಾ ಮುಚೋವಾ ವರ್ಷದ 4ನೇ ಹಾಗೂ ಅಂತಿಮ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಯುಎಸ್ ಓಪನ್ನಲ್ಲಿ ಸೆಮಿಫೈನಲ್ಗೇರುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ರ ಶ್ರೇಯಾಂಕಿತರ ಆಟಗಾರ್ತಿಯರಿಗೆ ಆಘಾತ ನೀಡಿ ಮುನ್ನಡೆಯುತ್ತಿದ್ದ ಜೆಲೆನಾ ಒಸ್ತಾಪೆಂಕೊ, ಸೊರೊನಾ ಕ್ರಿಸ್ಟಿಯಾ ಎಂಟರ ಘಟ್ಟದಲ್ಲಿ ನಿರಾಸೆ ಅನುಭವಿಸಿದ್ದಾರೆ.
ಎರಡನೇ ಶ್ರೇಯಾಂಕಿತ ಜೋಕೊವಿಕ್ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ 9ನೇ ಶ್ರೇಯಾಂಕಿತ ಅಮೆರಿಕದ ಟೇಲರ್ ಫ್ರಿಟ್ಜ್ ಎದುರು 6-1, 6-4, 6-4 ನೇರ ಸೆಟ್ಗಳಿಂದ ಗೆಲುವು ಸಾಧಿಸಿದರು. 2 ಗಂಟೆ 23 ನಿಮಿಷಗಳ ಹೋರಾಟದಲ್ಲಿ ಮೇಲುಗೈ ಸಾಧಿಸಿದ ಜೋಕೋ, ಫ್ರಿಟ್ಜ್ ವಿರುದ್ಧದ 12-0 ಅಜೇಯ ದಾಖಲೆ ಮುಂದುವರಿಸಿದರು. ಇದರೊಂದಿಗೆ 36 ವರ್ಷದ ಜೋಕೋ 4ನೇ ಯುಎಸ್ ಓಪನ್ ಹಾಗೂ 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯ ಆಸೆ ಜೀವಂತವಿರಿಸಿಕೊಂಡಿದ್ದು, ಮುಂದಿನ ಪಂದ್ಯದಲ್ಲಿ ಅಮೆರಿಕದ ಯುವ ಆಟಗಾರ ಬೆನ್ ಶೆಲ್ಟನ್ ಅವರನ್ನು ಎದುರಿಸಲಿದ್ದಾರೆ.
ಶ್ರೇಯಾಂಕರಹಿತ ಶೆಲ್ಟನ್ ಶೈನಿಂಗ್: ಆತಿಥೇಯರ ಆಶಾಕಿರಣವಾಗಿರುವ 20 ವರ್ಷದ ಆಟಗಾರ ಬೆನ್ ಶೆಲ್ಟನ್ ಕ್ವಾರ್ಟರ್ೈನಲ್ ಪಂದ್ಯದಲ್ಲಿ ದೇಶಬಾಂಧವ ಫ್ರಾನ್ಸಿಸ್ ಟಿಯಾಪೊ ವಿರುದ್ಧ 6-2, 3-6, 7-6, 6-2ರಿಂದ ಕಠಿಣ ಹೋರಾಟದ ಬಳಿಕ ಜಯದ ಸಂಭ್ರಮ ಕಂಡರು. ಇದರೊಂದಿಗೆ 1992ರ ಬಳಿಕ ಅಂತಿಮ 4ರ ಘಟ್ಟಕ್ಕೇರಿದ ಅಮೆರಿಕದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮೊದಲ ಗ್ರಾಂಡ್ ಸ್ಲಾಂ ಪ್ರಶಸ್ತಿಯ ಹಂಬಲದಲ್ಲಿರುವ ಶೆಲ್ಟನ್ ಸೆಮೀಸ್ನಲ್ಲಿ ಜೋಕೊವಿಕ್ ಸವಾಲನ್ನು ಹಿಮ್ಮೆಟ್ಟಿಸಬೇಕಿದೆ.
ಗೌಫ್ ಗೆ ಸುಲಭ ಜಯ: ಅಮೆರಿಕದ ಯುವ ತಾರೆ ಕೋಕೋ ಗೌಫ್ ಮೊದಲ ಬಾರಿಗೆ ತವರಿನ ಗ್ರಾಂಡ್ ಸ್ಲಾಂನಲ್ಲಿ ಸೆಮಿಫೈನಲ್ಗೇರಿದ ಸಾಧನೆ ಮಾಡಿದರು. ಚೊಚ್ಚಲ ಪ್ರಶಸ್ತಿಯ ತುಡಿತದಲ್ಲಿರುವ 19 ವರ್ಷದ ಗೌಫ್ ಕ್ವಾರ್ಟರ್ಫೈನಲ್ನಲ್ಲಿ 6-0,6-2 ನೇರ ಸೆಟ್ಗಳಿಂದ 20ನೇ ಶ್ರೇಯಾಂಕಿತೆ ಜೆಲೆನಾ ಒಸ್ತಾಪೆಂಕೊರನ್ನು ಮಣಿಸಿದರು. ಗೌಫ್ 2001ರ ಬಳಿಕ ಸೆಮೀಸ್ಗೇರಿದ ಕಿರಿಯ ಆಟಗಾರ್ತಿ ಎನಿಸಿದರು. ಇನ್ನೊಂದು ಕ್ವಾರ್ಟರ್ೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕ್ಯಾರೊಲಿನಾ ಮುಚೋವಾ 6-0, 6-3 ರಿಂದ ರೊಮೇನಿಯಾದ ಸೊರೊನಾ ಕ್ರಿಸ್ಟಿಯಾ ವಿರುದ್ಧ ಗೆಲುವು ಸಾಧಿಸಿದರು. ಕಳೆದ ವರ್ಷ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದ ಮುಚೋವಾ ಹಾಲಿ ಋತುವಿನಲ್ಲಿ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ರನ್ನರ್ ಅಪ್ ಆಗಿದ್ದಾರೆ.
ನಾಲ್ಕರ ಘಟ್ಟಕ್ಕೆ ಬೋಪಣ್ಣ ಜೋಡಿ: ಪುರುಷರ ಡಬಲ್ಸ್ನಲ್ಲಿ 6ನೇ ಶ್ರೇಯಾಂಕಿತ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಸೆಮಿೈನಲ್ಗೆ ಲಗ್ಗೆಯಿಟ್ಟಿದೆ. ಇಂಡೋ-ಆಸೀಸ್ ಜೋಡಿ 7-6, 6-1ರಿಂದ ಅಮೆರಿಕದ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೋ ಅವರನ್ನು ಪರಾಭವಗೊಳಿಸಿ ಸತತ 2ನೇ ಗ್ರಾಂಡ್ ಸ್ಲಾಂ ಉಪಾಂತ್ಯಕ್ಕೆ ಪ್ರವೇಶಿಸಿದರು. 43 ವರ್ಷದ ಬೋಪಣ್ಣಗೆ 2ನೇ ಬಾರಿ ೈನಲ್ಗೇರುವ ಅವಕಾಶವಿದೆ.