ಪಶ್ಚಿಮ ಬಂಗಾಳ ಚುನಾವಣೆ: ಕಲ್ಲು ಒಡೆಯುವ ಕೂಲಿಯ ಹೆಂಡತಿ ಬಿಜೆಪಿ ಅಭ್ಯರ್ಥಿ!

wb election candidate
wb election candidate Chandana
Published on

ಕಲ್ಕತ್ತ: ಈ ತಿಂಗಳು ಹಾಗೂ ಮುಂದಿನ ತಿಂಗಳು ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ಹಿಡಿಯಬೇಕು ಎಂದು ಹೊರಟಿರುವ ಬಿಜೆಪಿ ಅಲ್ಲಿ ತನ್ನನ್ನು ತಾನು ಕೇಡರ್ ಪಕ್ಷ ಎಂದು ಗುರುತಿಸಿಕೊಳ್ಳಲು ಹೊರಟಿದೆ. ಈ ದಿಶೆಯಲ್ಲಿ ಹಲವಾರು ಉತ್ತಮ ಪ್ರಯೋಗಗಳನ್ನು ಬಿಜೆಪಿ ಮಾಡುತ್ತಿದೆ.

ಬಂಗಾಳದ ಬಾಂಕೂರಾ ಜಿಲ್ಲೆಯ ಸಾಲ್​ತೋರಾ ಎಸ್​ಸಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ಮಹಿಳೆಯೊಬ್ಬರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ಹೌದು, ಚಂದನಾ ಬೌರಿ ಎಂಬ 28 ವರ್ಷದ ಮಹಿಳೆಯೇ ಇದೀಗ ವಿಧಾನಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ.

ವಿಶೇಷವೆಂದರೆ ಬಿಜೆಪಿ ಕಾರ್ಯಕರ್ತರಾಗಿರುವ ಚಂದನಾಳ ಗಂಡ ದಿನಗೂಲಿ ಆಧಾರದ ಮೇಲೆ ಕಲ್ಲು ಒಡೆಯುವ ಕೆಲಸ ಮಾಡುತ್ತಾರೆ. ಸಾಲ್​ತೋರಾದಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿರುವ ಇವರನ್ನು ಗುರುತಿಸಿ ಬಿಜೆಪಿ ಟಿಕೆಟ್ ನೀಡಿದೆ.

ಬಿಜೆಪಿಯ ಈ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. ಈ ವಿಷಯವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಅವರು ಬಂಗಾಳ ಬಿಜೆಪಿ ನಿರ್ಧಾರ ಸಮರ್ಥಿಸಿಕೊಂಡು, ಬಿಜೆಪಿಗನಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಸದ್ಯ ಸಾಲ್​ತೋರಾದಲ್ಲಿ ಟಿಎಂಸಿ ಅಧಿಕಾರ ಇದ್ದು, ಸ್ವಪನ್ ಬೌರಿ ಅವರು ಶಾಸಕರಾಗಿದ್ದಾರೆ. ಟಿಎಂಸಿಯ ಪ್ರಬಲ ಅಭ್ಯರ್ಥಿಯನ್ನು ಚಂದನಾ ಅವರು ಎದುರಿಸುತ್ತಾರಾ ಎಂಬುದನ್ನು ಕಾಯ್ದು ನೋಡಬೇಕಿದೆ. ಬಿಜೆಪಿ ಒಂದು ಮತ್ತು ಎರಡನೇ ಹಂತದ ಚುನಾವಣೆಗೆ 57 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net