

ಕೊಲ್ಕತಾ: ಪಶ್ಚಿಮ ಬಂಗಾಳದ ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆದ ಪ್ರಧಾನಿ ನರೇಂದ್ರ ಮೋದಿ, ಭಾನುವಾರ, ಕೊಲ್ಕತಾದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದ ಅಭಿವೃದ್ಧಿಗೆ ಅಡ್ಡಲಾಗಿ ನಿಂತಿದೆ ಎಂದು ಟೀಕಿಸಿದ ಮೋದಿ, "ಬಂಗಾಳದ ಜನರ ಬದಲಾವಣೆಯ ಆಸೆಯು ಇನ್ನೇನು ಈಡೇರಲಿದೆ... ಬಿಜೆಪಿ ರಾಜ್ಯದಲ್ಲಿ 'ಅಶೊಲ್ ಪೊರಿಬರ್ತನ್'(ಬಂಗಾಳಿಯಲ್ಲಿ 'ನಿಜವಾದ ಬದಲಾವಣೆ')ಅನ್ನು ತರಲಿದೆ" ಎಂದರು.
ರಾಜ್ಯದ ರಾಜಧಾನಿ ಕೊಲ್ಕತಾದಲ್ಲಿ ನಡೆದ 'ಬ್ರಿಗೇಡ್ ಛೋಲೋ ರಾಲಿ'ಯಲ್ಲಿ ಮಾತನಾಡುವಾಗ ಮೋದಿ, ಬಂಗಾಳಿಯ ಹಲವಾರು ಶಬ್ದಗಳನ್ನು ತಮ್ಮ ಭಾಷಣದಲ್ಲಿ ಬಳಸಿದರು. "ಬಂಗಾಳದ ಜನರಿಗೆ 'ಶಾಂತಿ', 'ಸೊನಾರ್ ಬಾಂಗ್ಲಾ'(ಸುಂದರವಾದ ಬಂಗಾಳ), 'ಪ್ರಗತಿಶೀಲ್ ಬಾಂಗ್ಲಾ'(ಪ್ರಗತಿಶೀಲ ಬಂಗಾಳ) ಬೇಕಾಗಿದೆ. ಈ 'ಅಶೊಲ್ ಪೊರಿಬರ್ತನ್' ಅನ್ನು ನಾವು ತರುತ್ತೇವೆ ಎಂಬ ವಿಶ್ವಾಸವನ್ನು ನಿಮ್ಮಲ್ಲಿ ಮೂಡಿಸಲು ನಾನು ಬಂದಿದ್ದೀನಿ" ಎಂದು ಉದ್ಗರಿಸಿದರು.
ಬಂಗಾಳಕ್ಕೆ ಹೆಚ್ಚಿನ ಹೂಡಿಕೆಯನ್ನು ತಂದು, ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಿ, ಪುನರ್ನಿರ್ಮಾಣ ಮಾಡುವುದಾಗಿ ಹೇಳಿದ ಮೋದಿ, "ಬಂಗಾಳದ ರೈತರಿಗಾಗಿ, ವ್ಯವಹಾರಸ್ಥರಿಗಾಗಿ, ಅಕ್ಕತಂಗಿಯರು ಮತ್ತು ಹೆಣ್ಣುಮಕ್ಕಳ ಏಳಿಗೆಗಾಗಿ ನಾವು ಶ್ರಮಿಸುತ್ತೇವೆ.. ನಿಮ್ಮ ಕನಸುಗಳನ್ನು ಈಡೇರಿಸಲು ನಾವು ಪ್ರತಿ ಕ್ಷಣ ಬದುಕುತ್ತೇವೆ" ಎಂದರು.
"ಬಂಗಾಳವು ಕಳೆದ 75 ವರ್ಷಗಳಲ್ಲಿ ಏನು ಕಳೆದುಕೊಂಡಿದೆ ಎನ್ನುವುದು ಜನರಿಗೆ ಗೊತ್ತು. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ. ಬಂಗಾಳದಿಂದ ಏನನ್ನು ಕಸಿದುಕೊಳ್ಳಲಾಗಿದೆಯೋ, ಅದು ವಾಪಸ್ ಬರಲಿದೆ" ಎಂದ ಮೋದಿ, "ಮುಂದಿನ 25 ವರ್ಷಗಳಲ್ಲಿ ಆಗಲಿರುವ ಅಭಿವೃದ್ಧಿಯನ್ನು ಬರುವ ಐದು ವರ್ಷಗಳು ನಿರ್ಧರಿಸಲಿವೆ. (ಬಿಜೆಪಿಗೆ ಅವಕಾಶ ಸಿಕ್ಕರೆ) 2047 ರಲ್ಲಿ 100ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಹೊತ್ತಿಗೆ ಬಂಗಾಳ ಮತ್ತೆ ದೇಶದ ಮುಂಚೂಣಿಯಲ್ಲಿರಲಿದೆ" ಎಂದರು.
ರಾಜ್ಯದ ಟಿಎಂಸಿ ಸರ್ಕಾರದ ಮೇಲೆ ವಾಕ್ಪ್ರಹಾರ ನಡೆಸಿದ ಮೋದಿ, "ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸೃಷ್ಟಿಸಿರುವ ಕೊಚ್ಚೆಯಿಂದಾಗಿ ಸದ್ಯದಲ್ಲೇ ಇಲ್ಲಿ ಕಮಲ ಅರಳಲಿದೆ. 'ಲೋಕತಂತ್ರ'ದ ಬದಲಿಗೆ 'ಲೂಟ್ತಂತ್ರ'ವನ್ನು ಟಿಎಂಸಿ ಪಾಲಿಸುತ್ತಿದೆ... ಬಂಗಾಳವನ್ನು ಅಭಿವೃದ್ಧಿಯೆಡೆಗೆ ಒಯ್ಯುವ ಬದಲು ಪ್ರತ್ಯೇಕತೆ ಕಡೆಗೆ ಒಯ್ಯುತ್ತಿದೆ... ಆದ್ದರಿಂದ ಕಮಲ ಅರಳುತ್ತಿದೆ. ನೀವು(ಟಿಎಂಸಿ) ಜನರನ್ನು ಧರ್ಮದ ಹೆಸರಲ್ಲಿ ವಿಭಜಿಸುತ್ತಿದ್ದೀರಿ... ಆದ್ದರಿಂದ ಕಮಲ ಅರಳುತ್ತಿದೆ" ಎಂದು ಮೋದಿ ಮಾರ್ಮಿಕವಾಗಿ ನುಡಿದರು.(ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ