

ರಾಜ್ಯ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದೆ. ಸಭೆ, ಸಮಾರಂಭ, ರೋಡ್ ಶೋ, ಸ್ಟಾರ್ ಪ್ರಚಾರಕರ ಕಾರ್ಯಕ್ರಮ ಮುಂತಾದವುಗಳ ಮೂಲಕ ಮತದಾರರನ್ನು ಓಲೈಸಲು ಪಕ್ಷಗಳು ಕಸರತ್ತು ನಡೆಸಿವೆ. ಇವೆಲ್ಲವುಗಳ ನಡುವೆ ಹೆಚ್ಚು ಗಮನಸೆಳೆಯುತ್ತಿರುವುದು, ಚರ್ಚೆಗೆ ಈಡಾಗಿರುವುದು ಪಕ್ಷಗಳು ಘೋಷಿಸಿರುವ ಪ್ರಣಾಳಿಕೆಗಳು, ಭರವಸೆಗಳು. ಹಲವು ಭರವಸೆಗಳಂತೂ ಮತದಾರರನ್ನು ಸೆಳೆಯಲು ಒಡ್ಡಿರುವ ಆಮಿಷಗಳಂತೆ ಭಾಸವಾಗುತ್ತವೆ. ವಾಸ್ತವದಲ್ಲಿ ಕಾರ್ಯಗತಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕುತ್ತವೆ. ಕಾಂಗ್ರೆಸ್ ಅನೇಕ ತಿಂಗಳುಗಳಿಂದ ಸರಣಿ ರೂಪದಲ್ಲಿ ಭರವಸೆಗಳನ್ನು ಘೋಷಿಸಿಕೊಂಡು ಬಂದಿದ್ದು, ಇದುವರೆಗೆ 6 ಗ್ಯಾರಂಟಿಗಳನ್ನು ನೀಡಿದೆ. ಪ್ರತಿ ಮನೆಗೆ ತಿಂಗಳಿಗೆ 200 ಯುನಿಟ್ವರೆಗೆ ಉಚಿತ ವಿದ್ಯುತ್; ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ. ನಿರುದ್ಯೋಗ ಭತ್ಯೆ; ಗೃಹಿಣಿಯರಿಗೆ ತಿಂಗಳಿಗೆ 2 ಸಾವಿರ ರೂ. ಧನಸಹಾಯ; ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ... ಇದರಲ್ಲಿ ಸೇರಿವೆ. ಗೃಹಿಣಿಯರಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ಯೋಜನೆಯನ್ನೇ ತೆಗೆದುಕೊಳ್ಳೋಣ. ಒಬ್ಬ ಗೃಹಿಣಿಗೆ ವರ್ಷಕ್ಕೆ 24 ಸಾವಿರ ರೂ. ಬೇಕಾಗುತ್ತದೆ. ರಾಜ್ಯದಲ್ಲಿ ಅಂದಾಜು 1.5 ಕೋಟಿ ಗೃಹಿಣಿಯರಿದ್ದಾರೆ. ಇದೊಂದೇ ಯೋಜನೆ ಜಾರಿಗೆ ಸರಿಸುಮಾರು 36,000 ಕೋಟಿ ರೂ. ಬೇಕಾಗುತ್ತದೆ. ಇನ್ನು ಎಲ್ಲ ಭರವಸೆಗಳನ್ನು ಈಡೇರಿಸಬೇಕೆಂದರೆ ರಾಜ್ಯ ಬಜೆಟ್ನ ಸಿಂಹಪಾಲು ವ್ಯಯವಾಗುತ್ತದೆ.
ಬಿಜೆಪಿ ಕೂಡ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್ಗೆ ಠಕ್ಕರ್ ಕೊಡುವ ರೀತಿಯಲ್ಲಿ ಪ್ರಣಾಳಿಕೆ ಪ್ರಕಟಿಸಿದೆ. ವರ್ಷಕ್ಕೆ 3 ಉಚಿತ ಗ್ಯಾಸ್ ಸಿಲಿಂಡರ್; ಪ್ರತಿ ದಿನ ಅರ್ಧ ಲೀಟರ್ ಉಚಿತ ನಂದಿನಿ ಹಾಲು; ಪ್ರತಿ ತಿಂಗಳು 5 ಕೆಜಿ ಸಿರಿಧಾನ್ಯ ವಿತರಣೆ... ಹೀಗೆ ಬಿಪಿಎಲ್ ಕಾರ್ಡ್ದಾರರನ್ನೇ ಗುರಿಯಾಗಿಸಿಕೊಂಡು ಆಫರ್ಗಳನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮತದಾರರಿಗೆ ಉಚಿತ ಕೊಡುಗೆಗಳ ಮೂಲಕ ಆಮಿಷವೊಡ್ಡುವುದಕ್ಕೆ ಮೊದಲಿನಿಂದಲೂ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವುದರಿಂದ ಬಿಜೆಪಿ ಇತಿಮಿತಿಯಲ್ಲಿ ಭರವಸೆಗಳನ್ನು ನೀಡಿರಬಹುದಾಗಿದೆ.
ಇನ್ನು ಜೆಡಿಎಸ್ ಸಹ ಹಿಂದೆಬಿದ್ದಿಲ್ಲ. ಗರ್ಭಿಣಿಯರಿಗೆ 6 ತಿಂಗಳ ಕಾಲ 6,000 ರೂ. ಭತ್ಯೆ; ವರ್ಷಕ್ಕೆ 5 ಅಡುಗೆ ಅನಿಲ ಸಿಲಿಂಡರ್ ಉಚಿತ; ಪ್ರತಿ ಕೃಷಿ ಕಾರ್ವಿುಕ ಕುಟುಂಬಕ್ಕೆ ಮಾಸಿಕ 2000 ರೂ. ಸಹಾಯಧನ; ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಪ್ರತಿ ಎಕರೆಗೆ 10,000 ರೂ. ಸಹಾಯಧನ; ಪ್ರತಿ ಆಟೋ ಚಾಲಕನಿಗೆ 2 ಸಾವಿರ ರೂ. ಮಾಸಾಶನ; ನೋಂದಾಯಿತ ಖಾಸಗಿ ಸೆಕ್ಯೂರಿಟಿ ಗಾರ್ಡ್ಗಳಿಗೆ ಮಾಸಿಕ 2 ಸಾವಿರ ರೂ. ಸಹಾಯಧನ... ಹೀಗೆ ಪಟ್ಟಿ ಬಹಳ ದೊಡ್ಡದಿದೆ. ಒಟ್ಟಿನಲ್ಲಿ, ಈ ಮೂರು ಪಕ್ಷಗಳ ಪೈಕಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ತೆರಿಗೆದಾರರ ಮೇಲೆ ಭಾರಿ ಹೊರೆ ಬೀಳುವ ಸಾಧ್ಯತೆ ಇದೆ. ಹಿಂದೆಲ್ಲ ಪ್ರಣಾಳಿಕೆ ಎಂದರೆ ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಈಗ ಹಾಗಿಲ್ಲ. ಇಂಥ ಭರವಸೆಗಳನ್ನು ಈಡೇರಿಸುವ ಹೊಣೆಗಾರಿಕೆಯಿಂದ ಅಧಿಕಾರಸ್ಥರು ತಪ್ಪಿಸಿಕೊಳ್ಳಲಾಗದು. ಯಾವುದೇ ಘೋಷಣೆ ಮಾಡುವ ಮುನ್ನ ಅದರ ಕಾರ್ಯಸಾಧ್ಯತೆ, ಆರ್ಥಿಕ ವೆಚ್ಚದ ಬಗ್ಗೆ ಸಾರಾಸಾರ ಯೋಚಿಸದಿದ್ದರೆ ಮುಂದಿನ ಸವಾಲು-ಪರಿಣಾಮ ಎದುರಿಸುವುದು ಸುಲಭವಲ್ಲ.