

ತಿರುವನಂತಪುರ: ಇದೇ 16ರಂದು ನಡೆದ ಕೇರಳ ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗೆ (ಕೆಇಎಎಂ) ಬಂದಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಇಡೀ ವಿದ್ಯಾರ್ಥಿ ಹಾಗೂ ಪಾಲಕರನ್ನು ಆತಂಕಕ್ಕೆ ದೂಡಿದೆ.
ಪ್ರವೇಶ ಪರೀಕ್ಷೆಯನ್ನು ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇವರಲ್ಲಿ ಶೇ 85ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಹಲವು ಪಾಲಕರು ಮಕ್ಕಳನ್ನು ಕಳುಹಿಸಲು ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಎರೆಲ್ಲರಲ್ಲಿಯೂ ಈಗ ಆತಂಕ ಮನೆಮಾಡಿದೆ.
ಪರೀಕ್ಷೆಗೆ ಬಂದಿರುವ ಬಹುತೇಕ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರನ್ನು ಇದಾಗಲೇ ಕ್ವಾರಂಟೈನ್ ಮಾಡಲಾಗಿದ್ದು, ಉಳಿದವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಪರೀಕ್ಷೆಗೆ ಕೇರಳ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಿಂದಲೂ ಪರೀಕ್ಷೆ ಬರೆದವರು ಇದ್ದಾರೆ.
ಇದನ್ನೂ ಓದಿ: ಕರೊನಾ ಸೋಂಕಿತರಿಗೂ ಸಿಇಟಿ ಬರೆಯಲು ಅವಕಾಶ
ತಿರುವನಂತಪುರದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರ ಪೈಕಿ ಒಬ್ಬ ವಿದ್ಯಾರ್ಥಿಯ ತಂದೆ ಮಗನನ್ನು ಕಳುಹಿಸಲು ಬಂದಿದ್ದರು. ಅವರಿಗೂ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸೋಂಕಿತ ವಿದ್ಯಾರ್ಥಿಗಳ ಜತೆಗಿದ್ದ ಎಲ್ಲರನ್ನು ಪತ್ತೆಹಚ್ಚಲು ಆರಂಭಿಸಿದೆ.
ಈ ಬಗ್ಗೆ ಪಾಲಕರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅಂತರ ಇರಲಿಲ್ಲ. ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಇದಲ್ಲದೇ ಮೂವರು ಸೋಂಕಿತ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿಯೇ ಪರೀಕ್ಷೆ ಬರೆಯುವ ಅವಕಾಶವನ್ನೂ ನೀಡಲಾಗಿತ್ತು. ಈ ಮೊದಲು ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯನ್ನು ಸರ್ಕಾರ ಯಶಸ್ವಿಯಾಗಿ ನಡೆಸಲಾಗಿತ್ತು. ಅದೇ ಆಧಾರದ ಮೇಲೆ ಇದನ್ನೂ ನಡೆಸಲಾಗಿತ್ತು ಎಂದು ಶಿಕ್ಷಣ ಇಲಾಖೆ ಹೇಳಿದೆ.