

ನವದೆಹಲಿ: ಕರೊನಾ ತಡೆಗಟ್ಟಲು ಕಳೆದ ಒಂದು ತಿಂಗಳಿಂದ ಹೇರಲಾಗಿರುವ ಲಾಕ್ಡೌನ್ನಿಂದ ಜನ-ಜೀವನ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೆ ಕೆಲ ವಿನಾಯಿತಿಗಳನ್ನು ನೀಡುವ ಮೂಲಕ ರಿಲೀಫ್ ನೀಡಿದೆ. ಮಾಲ್ ಹಾಗೂ ಥಿಯೇಟರ್ಗಳನ್ನು ಹೊರತುಪಡಿಸಿ ಅಂಗಡಿ-ಮುಂಗಟ್ಟುಗಳನ್ನು ಕೆಲ ನಿರ್ಬಂಧಗಳೊಂದಿಗೆ ತೆರೆಯಲು ಸರ್ಕಾರದ ಅನುಮತಿಯನ್ನು ನೀಡಿದೆ.
ಶುಕ್ರವಾರ ರಾತ್ರಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶದ ಪ್ರಕಾರ ಮಾಸ್ಕ್, ಗ್ಲೋವ್ಸ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಇದನ್ನು ಅನುಸರಿಸುವುದರೊಂದಿಗೆ ಅಂಗಡಿಗಳನ್ನು ತೆರೆಯಬಹುದಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಅಂಗಡಿಯವರಿಗೂ ಹಾಗೂ ಖರೀದಿದಾರರಿಗೂ ಬಿಗ್ ರಿಲೀಫ್ ನೀಡಿದೆ.
ಆದೇಶದ ಪ್ರತಿಯೊಂದಿಗೆ ಟ್ವೀಟ್ ಮಾಡಿರುವ ಗೃಹ ಸಚಿವಾಲಯದ ವಕ್ತಾರ, ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಅಂಗಡಿಗಳು ಮತ್ತು ಸ್ಥಾಪನೆ ಕಾಯ್ದೆಯಡಿ ನೋಂದಾಯಿತ ಅಂಗಡಿಗಳಿಗೆ ಲಾಕ್ಡೌನ್ ರಿಯಾಯಿತಿ ಅನ್ವಯವಾಗಲಿದೆ. ವಸತಿ ಸಂಕೀರ್ಣದಲ್ಲಿರುವ ಅಂಗಡಿಗಳು, ನೆರೆಹೊರೆ ಮತ್ತು ಸ್ವತಂತ್ರ ಅಂಗಡಿಗಳು ಇಂದಿನಿಂದ ಬಾಗಿಲು ತೆರೆಯಬಹುದಾಗಿದೆ. ಆದರೆ, ನಿರ್ಬಂಧಗಳು ಅನ್ವಯವಾಗಲಿದೆ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ.
ಮುನ್ಸಿಪಾಲ್ ಕಾರ್ಪೊರೇಶನ್ ಮತ್ತು ಮುನ್ಸಿಪಾಲಿಟಿ ಸಮೀಪ ಇರುವ ಮಾರುಕಟ್ಟೆ ಸಂಕೀರ್ಣಗಳು ಕೂಡ ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ, ಶೇ 50 ರಷ್ಟು ಕಾರ್ಮಿಕರು ಮಾತ್ರ ಕೆಲಸ ಮಾಡಬೇಕು. ಅದರಲ್ಲೂ ಮಾಸ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ. ಇನ್ನು ಲಾಕ್ಡೌನ್ ಹಾಟ್ಸ್ಪಾಟ್ ಮತ್ತು ಕಂಟೈನ್ಮೆಂಟ್ ಝೋನ್ಗಳಲ್ಲಿ ಅನ್ವಯವಾಗುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.
ದೇಶಾದ್ಯಂತ 23 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಕರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, 700ಕ್ಕೂ ಹೆಚ್ಚು ಮಂದಿ ಈವರೆಗೂ ಪ್ರಾಣವನ್ನು ಕಳೆದುಕೊಂಡಿದ್ದಾರೆ. (ಏಜೆನ್ಸೀಸ್)