More

    ಹೆಚ್ಚುತ್ತಲೇ ಇದೆ ಸಾವು, ವಿಶ್ವಾದ್ಯಂತ 2 ಲಕ್ಷದ ಸನಿಹ ಬಲಿ; ಭಾರತವೇ ಸ್ವಲ್ಪ ಸೇಫ್

    ವಾಷಿಂಗ್ಟನ್: ವಿಶ್ವಾದ್ಯಂತ ಅಟ್ಟಹಾಸ ಮುಂದುವರಿಸಿರುವ ಕರೊನಾಗೆ ಬಲಿಯಾದವರ ಸಂಖ್ಯೆ 2 ಲಕ್ಷ ಸನಿಹಕ್ಕೆ ಬಂದು ನಿಂತಿದೆ. ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿರುವ ಹೊರತಾಗಿಯೂ ಚೀನಾದ ವುಹಾನ್​ನಲ್ಲಿ ಹುಟ್ಟಿ 150ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯಾಪಿಸಿರುವ ಈ ಮಹಾಮಾರಿಗೆ ಅಮೆರಿಕವೊಂದರಲ್ಲೇ 50 ಸಾವಿರ ಜನರು ಮೃತಪಟ್ಟಿದ್ದಾರೆ. ವಿಶ್ವದ ನಂಬರ್ 1 ಶ್ರೀಮಂತ ರಾಷ್ಟ್ರದಲ್ಲಿ ಪ್ರತಿದಿನ ಸುಮಾರು 2 ಸಾವಿರಕ್ಕಿಂತ ಹೆಚ್ಚು ಜನರು ಸಾವನ್ನಪು್ಪತ್ತಿದ್ದು, ದಿನವೊಂದಕ್ಕೆ 30 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಸೋಂಕಿತರ ಸಂಖ್ಯೆ 8.90 ಲಕ್ಷಕ್ಕೆ ಮುಟ್ಟಿದೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇ.10ರಿಂದ ಮೇಲಕ್ಕೇರದೇ ಇರುವುದು ಸರ್ಕಾರವನ್ನು ಚಿಂತೆಗೆ ದೂಡಿದೆ. ಈವರೆಗೆ ಸುಮಾರು 85 ಸಾವಿರ ಜನರಷ್ಟೇ ಚೇತರಿಸಿಕೊಂಡಿದ್ದಾರೆ. ಒಟ್ಟಾರೆ 47.75 ಲಕ್ಷ ಜನರಿಗೆ ಕರೊನಾ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಇನ್ನೂ 15 ಸಾವಿರ ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಚೀನಾದ ವುಹಾನ್​ನಿಂದ ಫೆಬ್ರವರಿ ಮಧ್ಯದವರೆಗೂ ಅಮೆರಿಕಕ್ಕೆ ಬಂದ ಸುಮಾರು 4 ಲಕ್ಷಕ್ಕೂ ಅಧಿಕ ಪ್ರಯಾಣಿಕ ರಿಂದಾಗಿ ಅಮೆರಿಕದಲ್ಲಿ ಕರೊನಾ ತನ್ನ ವ್ಯಾಪ್ತಿಯನ್ನು ಸದ್ದಿಲ್ಲದೆಯೇ ವೇಗವಾಗಿ ವಿಸ್ತರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ವಿಧಿಸುವಲ್ಲಿ ಹಾಗೂ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ತಪಾಸಣೆಯಲ್ಲಿ ತೋರಿದ ನಿರ್ಲಕ್ಷ್ಯವೇ ಅಮೆರಿಕ ದೊಡ್ಡ ಬೆಲೆ ತೆರುವಂತೆ ಮಾಡಿದೆ.

    ಮೂರು ದೇಶ ಗಂಭೀರ: ಅಮೆರಿಕದ ನಂತರ ಕರೊನಾಗೆ ಅತೀ ಹೆಚ್ಚು ಬಾಧಿತವಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇಟಲಿ, ಸ್ಪೇನ್ ಮತ್ತು ಫ್ರಾನ್ಸ್ ಇವೆ. ಇಟಲಿಯಲ್ಲಿ ಈಗಾಗಲೇ 25 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 1.89 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಇಲ್ಲಿ ಈವರೆಗೆ 57 ಸಾವಿರ ಜನರು ಗುಣಮುಖರಾಗಿದ್ದಾರೆ. ಸ್ಪೇನ್​ನಲ್ಲಿ ಮೃತರ ಸಂಖ್ಯೆ 22 ಸಾವಿರದ ಗಡಿ ದಾಟಿದ್ದು, 2.19 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿವೆ. ಫ್ರಾನ್ಸ್​ನಲ್ಲಿ 21 ಸಾವಿರ ಸಾವು ಸಂಭವಿಸಿದ್ದು, ಒಂದೂವರೆ ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ಇವುಗಳ ಜತೆಗೆ ಬ್ರಿಟನ್​ನಲ್ಲೂ ತೀವ್ರತೆ ಹೆಚ್ಚಿದ್ದು, ಈವರೆಗೆ 18 ಸಾವಿರ ಜನರನ್ನು ಕರೊನಾ ಬಲಿ ಪಡೆದಿದೆ. ಬ್ರಿಟನ್​ನಲ್ಲಿ 1.38 ಲಕ್ಷ ಪ್ರಕರಣಗಳು ವರದಿಯಾಗಿವೆ.

    27.63 ಲಕ್ಷ ಸೋಂಕಿತರು: ವಿಶ್ವದಾದ್ಯಂತ ಕರೊನಾಗೆ ಬಲಿಯಾದವರ ಸಂಖ್ಯೆ 2 ಲಕ್ಷದ ಗಡಿ ದಾಟುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಸದ್ಯ ಜಾಗತಿಕವಾಗಿ 27.63 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಕಳೆದ 24 ತಾಸಿನಲ್ಲಿ 2,761 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1.93 ಲಕ್ಷಕ್ಕೆ ಏರಿಕೆಯಾಗಿದೆ. ಹೊಸದಾಗಿ 40 ಸಾವಿರ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 27.63 ಲಕ್ಷಕ್ಕೆ ಏರಿದೆ. ಕರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲೂ ಪ್ರಗತಿ ಕಂಡುಬಂದಿದ್ದು, ಈವರೆಗೆ ಒಟ್ಟಾರೆ 7.57 ಲಕ್ಷ ಜನರು ಗುಣಮುಖರಾಗಿದ್ದಾರೆ.

    ಶೇ.20.5 ಸೋಂಕಿತರು ಗುಣಮುಖ: ದೇಶದಲ್ಲಿ ಕರೊನಾ ಸೋಂಕಿತರ ಗುಣಮುಖ ಪ್ರಮಾಣ ಶೇ. 20.57ಕ್ಕೆ ವೃದ್ಧಿಸಿದೆ. ಒಟ್ಟು 5,250ಕ್ಕೂ ಹೆಚ್ಚು ಮಂದಿ ಈಗ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕು ಪಸರಿಸುವ ವೇಗ ತಗ್ಗಿದ್ದು, ದ್ವಿಗುಣವಾಗುವ ಪ್ರಮಾಣ ಏಳೂವರೆ ದಿನದಿಂದ 10 ದಿನಕ್ಕೆ ವಿಸ್ತರಿಸಿದೆ. ಕನಿಷ್ಠ 80 ಜಿಲ್ಲೆಗಳಲ್ಲಿ ಎರಡು ವಾರದಿಂದ ಹೊಸದಾಗಿ ಕರೊನಾ ಪ್ರಕರಣ ವರದಿಯಾಗಿಲ್ಲ ಎಂದು ಹೇಳಿದೆ.

    9.45 ಲಕ್ಷ ಶಂಕಿತರನ್ನು ಗುರುತಿಸಲಾಗಿದ್ದು, ಇವರ ಮೇಲೆ ಜಿಲ್ಲಾ ಮಟ್ಟದಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ಪ್ರತಿ ಮನೆಯನ್ನು ಸರ್ವೆ ನಡೆಸಿ ಇವರನ್ನು ಪತ್ತೆ ಮಾಡಲಾಗಿದ್ದು, ಸೋಂಕಿತ ವಲಯದಲ್ಲಿರುವವರನ್ನು ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್, ಐಸೋಲೇಷನ್​ಗಳಲ್ಲಿ ಇರಿಸಲಾಗಿದೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಎಸ್.ಕೆ.ಸಿಂಗ್ ಹೇಳಿದ್ದಾರೆ.

    ಭಾರತದಲ್ಲಿ ಮೃತರ ಪ್ರಮಾಣ ಕಡಿಮೆ: ಕರೊನಾ ಕಾರಣ ಜಾಗತಿಕ ಮರಣ ಸಂಖ್ಯೆ ಹೋಲಿಸಿದರೆ ಭಾರತದಲ್ಲಿ ಮೃತರ ಪ್ರಮಾಣ ಕಡಿಮೆ ಇದೆ. ಕಳೆದ ಕೆಲವು ವಾರಗಳಲ್ಲಂತೂ ಅಮೆರಿಕ, ಇಟಲಿ, ಸ್ಪೇನ್, ಬ್ರಿಟನ್, ಫ್ರಾನ್ಸ್​ಗಳಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಸಾಯುತ್ತಿದ್ದಾರೆ. ಆದರೆ, ಭಾರತದಲ್ಲಿ ಕರೊನಾ ಇಷ್ಟು ರೌದ್ರಾವತಾರ ತಾಳಿಲ್ಲ ಎಂದು ಕೋಲ್ಕತ ಮತ್ತು ಬೆಂಗಳೂರಿನಲ್ಲಿ ಅಂತ್ಯೇಷ್ಟಿ ಸಂಸ್ಕಾರ ಸೇವೆ ಒದಗಿಸುವ ಶ್ರುತಿ ರೆಡ್ಡಿ ಹೇಳಿದ್ದಾರೆ.

    ತ್ರಿಪುರಾ ಕರೊನಾ ಮುಕ್ತ: ಅಗರ್ತಲಾ: ಗೋವಾ ಮತ್ತು ಮಣಿಪುರ ಕರೊನಾ ಮುಕ್ತ ಎಂದು ಘೊಷಿಸಿಕೊಂಡ ಬೆನ್ನಲ್ಲೇ ತ್ರಿಪುರಾ ತನ್ನನ್ನು ಕರೊನಾ ಮುಕ್ತ ಎಂದು ಘೊಷಿಸಿಕೊಂಡಿದೆ. ರಾಜ್ಯದಲ್ಲಿ ಸೋಂಕಿಗೆ ಒಳಗಾಗಿದ್ದ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ. ಲಾಕ್​ಡೌನ್​ಗೂ ಮೊದಲು ಗುವಾಹಟಿಯಿಂದ ರಾಜ್ಯಕ್ಕೆ ಬಂದಿದ್ದ ಮಹಿಳೆಯಲ್ಲಿ ಏಪ್ರಿಲ್ 6ರಂದು ಮೊದಲ ಕರೊನಾ ವೈರಸ್ ಪತ್ತೆಯಾಗಿತ್ತು. ಚಿಕಿತ್ಸೆಯ ನಂತರ ಆಕೆ ಗುಣಮುಖವಾಗಿದ್ದು ಏಪ್ರಿಲ್ 16ರಂದು ಆಕೆಯನ್ನು ಗೋಮಟಿ ಜಿಲ್ಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕಿಸಿಡಲಾಗಿತ್ತು. ಅದೇ ದಿನ ತ್ರಿಪುರ ರಾಜ್ಯ ರೈಫೆಲ್ಸ್​ನ ಯೋಧನೊಬ್ಬನಲ್ಲಿ ಸೋಂಕು ಕಾಣಿಸಿಕೊಂಡಿದ್ದು ಆತನನ್ನು ಜಿಬಿ ಪಂಥ್ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಏಪ್ರಿಲ್ 23ರಂದು ಆತ ಗುಣಮುಖವಾಗಿರುವುದಾಗಿ ಸಿಎಂ ತಿಳಿಸಿದ್ದಾರೆ. ಸದ್ಯ ರಾಜ್ಯದಲ್ಲಿ 111 ಜನರನ್ನು ಶಂಕಿತರೆಂದು ಗುರುತಿಸಲಾಗಿದ್ದು 227 ಜನರನ್ನು ಹೋಂ ಕ್ವಾರಂಟೈನ್​ನಲ್ಲಿಡಲಾಗಿದೆ.

    ಲಾಕ್​ಡೌನ್ ಇಲ್ಲದಿದ್ದರೆ 1ಲಕ್ಷ ಕರೊನಾ ಕೇಸ್: ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವ್ಯಾಪಿ ಲಾಕ್​ಡೌನ್ ಘೊಷಿಸದಿದ್ದರೆ ದೇಶದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ ಇಷ್ಟು ಹೊತ್ತಿಗೆ ಒಂದು ಲಕ್ಷ ದಾಟಿರುತ್ತಿತ್ತು. ಪ್ರಧಾನಿಯವರ ಕ್ರಮ ಸಕಾಲಿಕವಾದುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ದೇಶದಲ್ಲಿ ಕರೊನಾ ವೈರಸ್ ಹಾವಳಿ ಈಗ ನಿಯಂತ್ರಣದಲ್ಲಿದೆ. ಪರಿಣಾಮಕಾರಿ ಕಣ್ಗಾವಲು ಜಾಲ ಹಾಗೂ ಲಾಕ್​ಡೌನ್ ನಿಯಮಗಳ ಪಾಲನೆಯಿಂದ ಇದು ಸಾಧ್ಯವಾಗಿದೆಯೆಂದು ಅಧಿಕಾರಿಗಳು ತಿಳಿಸಿದರು. ಆರೋಗ್ಯ ವ್ಯವಸ್ಥೆಯ ಸನ್ನದ್ಧತೆ, ಆರ್ಥಿಕತೆಯನ್ನು ಹಳಿಗೆ ತರಲು ಹಾಗೂ ಲಾಕ್​ಡೌನ್ ತೆರವಿನ ನಂತರ ಜನರ ಸಂಕಷ್ಟ ನಿವಾರಣೆಗೆ ಕ್ರಮಗಳನ್ನು ಶಿಫಾರಸು ಮಾಡಲು 11 ಉನ್ನತಾಧಿಕಾರದ ಸಮಿತಿಗಳನ್ನು ರಚಿಸಲಾಗಿದೆ. ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಲಾಕ್​ಡೌನ್ ಪರಿಣಾಮಕಾರಿಯಾಗಿದೆ ಎಂದು ಒಂದು ಸಮಿತಿಯ ಅಧ್ಯಕ್ಷ ಹಾಗೂ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts