ಅದಮ್ಯ ಚೇತನ ಸಂಸ್ಥೆಗೆ ಅಮಿತ್ ಷಾ ಭೇಟಿ; ಶೂನ್ಯ ತ್ಯಾಜ್ಯ ಅಡುಗೆ ಮನೆಯನ್ನು ಕುತೂಹಲದಿಂದ ವೀಕ್ಷಣೆ

Amith Sha Visit Adamya Chethana
Published on

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಅದಮ್ಯ ಚೇತನ ಸಂಸ್ಥೆಗೆ ಭೇಟಿ ನೀಡಿ, ಶೂನ್ಯ ತ್ಯಾಜ್ಯ ಅಡುಗೆ ಮನೆಯನ್ನು ವೀಕ್ಷಿಸಿದರು. ನಂತರ ಡಾ. ತೇಜಸ್ವಿನಿ ಅನಂತಕುಮಾರ್‌ ಅವರ ಜತೆಗೆ ಹೊಸ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.

ನಗರದ ಗವಿಪುರಗುಟ್ಟಳ್ಳಿಯಲ್ಲಿರುವ ಅದಮ್ಯ ಚೇತನ ಸಂಸ್ಥೆಯ ಅಡುಗೆ ಮನೆಗೆ ಅಮಿಷಾ ಭೇಟಿ ನೀಡಿ ಅಡುಗೆ ಮನೆಯಲ್ಲಿ ಪ್ರತಿನಿತ್ಯ ನಡೆಯುವಂತಹ ಅಡುಗೆ ತಯಾರಿಯ ಕೆಲಸಗಳ ಬಗ್ಗೆ ವಿಸ್ತ್ರತವಾಗಿ ಮಾಹಿತಿ ಪಡೆದುಕೊಂಡರು. ಅದಮ್ಯ ಚೇತನ ಸಂಸ್ಥೆ ಸ್ಥಾಪನೆಯ ಹಿಂದೆ ದಿವಂಗತ ಅನಂತಕುಮಾರ್‌ ಅವರ ಅದಮ್ಯ ಕನಸುಗಳ ಬಗ್ಗೆ ಡಾ. ತೇಜಸ್ವಿನಿ ಅನಂತಕುಮಾರ್‌ ಗೃಹ ಸಚಿವರಿಗೆ ವಿವರಣೆ ನೀಡಿದರು.

ಪ್ರತಿ ನಿತ್ಯ ಸುಮಾರು 70 ಸಾವಿರಕ್ಕೂ ಹೆಚ್ಚು ಊಟಗಳನ್ನ ಈ ಅಡುಗೆ ಮನೆಯಲ್ಲಿ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಥರಹದ ತ್ಯಾಜ್ಯ ಉತ್ಪತ್ತಿಯಾಗುವುದಿಲ್ಲ. ಹಾಗೆಯೇ, ಉಪಯೋಗಿಸಿದ ನೀರಿನ ಮರುಬಳಕೆಯನ್ನು ಮಾಡಲಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನ ಬಳಸದೇ ಅಡುಗೆ ಮಾಡುವುದು ಈ ಅಡುಗೆ ಮನೆಯ ಮತ್ತೊಂದು ವಿಶೇಷ ಎಂದು ವಿವರಿಸಿದರು.

ಅನಂತಕುಮಾರ್ ಅವರ ಚಿಂತನೆಯ ಹಾದಿಯಲ್ಲಿಯೇ ಹಸಿರು ಭಾನುವಾರ, ದೇಗುಲ ದರ್ಶನ, ಅನಂತಕುಮಾರ್‌ ಪ್ರತಿಷ್ಠಾನದ ಮೂಲಕ ಸಮಾಜ ಸೇವೆಯಂತಹ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತೇಜಸ್ವಿನಿ ಅನಂತಕುಮಾರ್ ಮಾಹಿತಿ ನೀಡಿದರು. ಈ ವೇಳೆ ಅನಂತಕುಮಾರ್‌ ಪ್ರತಿಷ್ಠಾನದ ಮೂಲಕ ಯುವ ಜನತೆಯಲ್ಲಿ ನಾಯಕತ್ವ ಗುಣಗಳನ್ನ ಬೆಳಸುತ್ತಿರುವುದನ್ನು ಕೇಳಿ ಅಮಿತ್ ಷಾ ಸಂತಸ ಪಟ್ಟರು.

ಅನಂತ ಸೇವಾ ಉತ್ಸವದಲ್ಲಿ ಭಾಗವಹಿಸಿದ ಅಮಿತ್ ಷಾ, "ತೇಜಸ್‌ ಯುದ್ದವಿಮಾನ ಅಭಿವೃದ್ದಿಯ ಯಶೋಗಾಥೆ" ಪುಸ್ತಕದ ಕನ್ನಡ ಅವತರಣಿಕೆಯನ್ನು ಲೋಕಾರ್ಪಣೆಗೊಳಿಸಿದರು. ಸಂಪೂರ್ಣ ಸ್ವದೇಶಿ ನಿರ್ಮಿತ ತೇಜಸ್‌ ಯುದ್ದವಿಮಾನದ ವಿನ್ಯಾಸದಲ್ಲಿ ಡಾ. ತೇಜಸ್ವಿನಿ ಅನಂತಕುಮಾರ್‌ ಅವರು ಸೇವೆ ಸಲ್ಲಿಸಿದ್ದರು, ಈ ಪುಸ್ತಕದ ಕನ್ನಡ ಅವತರಣಿಕೆಯ ಲೋಕಾರ್ಪಣೆಯ ಸಂದರ್ಭದಲ್ಲಿ ಅವರ ಸಹದ್ಯೋಗಿಗಳು ನೆನೆಪಿಸಿಕೊಂಡರು.

ಈ ಸಂಧರ್ಭದಲ್ಲಿ ಬಿಜೆಪಿ ರಾಜ್ಯ ಪ್ರಭಾರಿ ಅರುಣ್‌ ಸಿಂಗ್‌, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಕಂದಾಯ ಸಚಿವ ಆರ್‌. ಅಶೋಕ್, ಸಹಕಾರ ಸಚಿವ ಎಸ್‌.ಟಿ ಸೋಮಶೇಖರ್‌, ಗೃಹ ಸಚಿವ ಅರಗ ಜ್ಞಾನೇಂದ್ರ, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ನಂದಕುಮಾರ್‌, ಪ್ರದೀಪ್‌ ಓಕ್‌, ಐಶ್ಚರ್ಯ ಅನಂತಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net