ಸರ್ಕಾರಿ ಶಾಲೆಗಳತ್ತ ನಿರಾಸಕ್ತಿ ವರದಿ ಕೇಳಿದ ಕೇಂದ್ರ ಸರ್ಕಾರ; ಕರ್ನಾಟಕದಲ್ಲೂ 2.15 ಲಕ್ಷ ಇಳಿಕೆ

ವಿಜಯವಾಣಿ (4)
Published on

ಬೆಂಗಳೂರು: ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿರುವುದು ಕೇಂದ್ರ ಸರ್ಕಾರವನ್ನು ಕಂಗೆಡಿಸಿದೆ. ಕರ್ನಾಟಕದಲ್ಲಿಯೇ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ ಎಂಬುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ದೇಶದ ಇತರ 23 ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಯಿದೆ. ಇದು ಸಹಜವಾಗಿಯೇ ಕಳವಳಕ್ಕೂ ಕಾರಣವಾಗಿದೆ. ಪರಿಣಾಮವಾಗಿ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯದ ಮೂಲಕ ಸೂಚನೆ ನೀಡಲಾಗಿದೆ. ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಪರಿಹಾರೋಪಾಯಗಳನ್ನು ತಿಳಿಸುವಂತೆಯೂ ನಿರ್ದೇಶಿಸಲಾಗಿದೆ.

ಪಿಎಂ -ಪೋಷಣ್ 2024-25ನೇ ಸಾಲಿನ ಯೋಜನೆಯ ಆಯವ್ಯಯ, ಯೋಜನೆ ಹಾಗೂ ಪ್ರಗತಿ ಪರಿಶೀಲನೆಗಾಗಿ ಏಪ್ರಿಲ್​ನಲ್ಲಿ ನಡೆಸಲಾಗಿದ್ದ 33 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಭೆಯ ನಡಾವಳಿಗಳ ಪ್ರಕಾರ 23 ರಾಜ್ಯಗಳ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿತಗೊಂಡಿರುವುದು ದಾಖಲಾಗಿದೆ. ಈ ಪೈಕಿ ಎಂಟು ರಾಜ್ಯಗಳಲ್ಲಿ ಒಂದು ಲಕ್ಷಕ್ಕಿಂತಲೂ ಕಡಿಮೆಯಾಗಿರುವುದು ಕಂಡುಬಂದಿದೆ. ಅದರಲ್ಲೂ ಉತ್ತರಪ್ರದೇಶವೊಂದರಲ್ಲಿಯೇ 21.83 ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಿಂದ ಕಡಿಮೆಯಾಗಿರುವುದು ಗೊತ್ತಾಗಿದೆ. ಬಿಹಾರದಲ್ಲಿ 6.14 ಲಕ್ಷ, ರಾಜಸ್ಥಾನದಲ್ಲಿ 5.63 ಲಕ್ಷ ಹಾಗೂ ಪಶ್ಚಿಮ ಬಂಗಾಳದಲ್ಲಿ 4.01 ಲಕ್ಷ ವಿದ್ಯಾರ್ಥಿಗಳು ಕಡಿಮೆ ಆಗಿದ್ದಾರೆ. 2023-24ಕ್ಕೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ದಾಖಲಾತಿ ಪ್ರಮಾಣವು 2 ಲಕ್ಷದಷ್ಟು ಕಡಿಮೆಯಾಗಿದೆ. ತಮಿಳುನಾಡಿನಲ್ಲಿ 1.65, ಅಸ್ಸಾಂನಲ್ಲಿ 1.68 ಲಕ್ಷ ವಿದ್ಯಾರ್ಥಿಗಳು, ದೆಹಲಿಯಲ್ಲಿ 1.05 ಲಕ್ಷ ವಿದ್ಯಾರ್ಥಿಗಳು ಕಡಿಮೆಯಾಗಿರುವುದು ಕಂಡುಬಂದಿದೆ.

ಜೂ.30ರೊಳಗೆ ಸಲ್ಲಿಸಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಡಿಮೆಯಾಗುತ್ತಿರುವುದಕ್ಕೆ ಕೇಂದ್ರದ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಾರಣಗಳನ್ನು ಗುರುತಿಸಿ ಜೂ.30ರೊಳಗೆ ವರದಿ ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದಾರೆ.

ಯುಡೈಸ್ ವರದಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳೆದ ವರ್ಷದ ಅಂದರೆ 2023-24ನೇ ಸಾಲಿನ ಯೂಡೈಸ್+ (ಯೂನಿಫೈಡ್ ಡಿಸ್ಟ್ರಿಕ್ಟ್ ಇನ್ಪಮೇಷನ್ ಫಾರ್ ಎಜಕೇಷನ್ +) ವರದಿಯಲ್ಲಿ ಬಹಿರಂಗಗೊಂಡಿತ್ತು. ಈ ವರದಿಯಲ್ಲಿ ಒಟ್ಟಾರೆ 1.5 ಕೋಟಿ ಮಕ್ಕಳು ಶಾಲೆಯಿಂದ ಹೊರಗಿರುವುದನ್ನು ತಿಳಿಸಿತ್ತು. 2018-19ರಿಂದ 2021-22ರ ಅವಧಿಯ ಸರಾಸರಿ ಪ್ರವೇಶಾತಿಗೆ ಹೋಲಿಸಿದಲ್ಲಿ ಈ ಅಂತರ ಕಂಡುಬಂದಿತ್ತು. ಇದೀಗ ಪಿಎಂ-ಪೋಷಣ್ ಅಂಕಿ-ಅಂಶಗಳನ್ನು ಗಮನಿಸಿದಲ್ಲಿ ಈ ಕೊರತೆ 2024-25ರಲ್ಲೂ ಮುಂದುವರಿದಿರುವುದು ಕಂಡುಬಂದಿದೆ. ಜತೆಗೆ, ಸರ್ಕಾರಕ್ಕೆ ಹೊಸ ಸಂಕಷ್ಟ ತಂದಿಟ್ಟಿದೆ ಎಂದೇ ವಿಶ್ಲೇಷಿಸಲಾಗಿದೆ.

ಬಿಸಿಯೂಟಕ್ಕಿಲ್ಲ ಬೇಡಿಕೆ: ದೆಹಲಿಯಲ್ಲಿ ಪಿಎಂ-ಪೋಷಣ್ ಯೋಜನೆ ವ್ಯಾಪ್ತಿ ಅತ್ಯಂತ ಕಡಿಮೆಯಾಗಿದೆ. ಬಿಸಿಯೂಟ ಪಡೆಯುವವರ ಪ್ರಮಾಣ 97 ಸಾವಿರದಷ್ಟು ಕಡಿಮೆಯಾಗಿದೆ. ಬಾಲವಾಟಿಕಾಗಳಲ್ಲಿ ಶೇ.60, ಪ್ರಾಥಮಿಕ- ಶೇ.69 ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶೇ.62 ಮಕ್ಕಳು ಮಾತ್ರ ಬಿಸಿಯೂಟ ಪಡೆಯುತ್ತಿದ್ದಾರೆ. ಇದನ್ನು ಉತ್ತಮಪಡಿಸುವಂತೆ ದೆಹಲಿ ಸರ್ಕಾರಕ್ಕೆ ತಿಳಿಸಲಾಗಿದೆ. ಉತ್ತರಪ್ರದೇಶದಲ್ಲಿ ಬಿಸಿಯೂಟ ಪಡೆಯುವ ಮಕ್ಕಳ ಸಂಖ್ಯೆ 5.41 ಲಕ್ಷ ಕಡಿಮೆಯಾಗಿದೆ. ರಾಜಸ್ಥಾನದಲ್ಲಿ 3.27 ಲಕ್ಷ, ಪಶ್ಚಿಮ ಬಂಗಾಳದಲ್ಲಿ 8.04 ಲಕ್ಷ ಮಕ್ಕಳು ಬಿಸಿಯೂಟ ಬೇಡ ಎಂದಿದ್ದಾರೆ. ಹಲವೆಡೆಗಳಲ್ಲಿ ಮಕ್ಕಳು ಮನೆಯಿಂದ ಊಟ ತರುತ್ತಿರುವುದು ಕಂಡುಬಂದಿದೆ. ಹೀಗಾಗಿ ಬಿಸಿಯೂಟದ ಗುಣಮಟ್ಟ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ.

ಸಂಭಾವ್ಯ ಕಾರಣಗಳು

  • ಮೊದಲಿನ ದತ್ತಾಂಶ ಸಂಗ್ರಹ ವಿಧಾನಕ್ಕೂ ಈಗಿನ ವಿಧಾನಕ್ಕೂ ವ್ಯತ್ಯಾಸವಿದೆ. ಪ್ರಸ್ತುತ ವಿದ್ಯಾರ್ಥಿವಾರು ಅಂಕಿ-ಸಂಖ್ಯೆಗಳನ್ನು ದಾಖಲಿಸಲಾಗುತ್ತಿದ್ದು, ಇದು ನಕಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಇಲ್ಲವಾಗಿಸಿದೆ.
  • ಕೋವಿಡ್ ಬಳಿಕ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಭಾರಿ ಹೆಚ್ಚಾಗಿತ್ತು. ಇದೀಗ ಪಾಲಕರು ಮತ್ತೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುವ ಟ್ರೆಂಡ್ ನಡೆಯುತ್ತಿರಬಹುದು.

ರಾಜ್ಯಗಳು ದಾಖಲಾತಿ ಇಳಿಕೆ

  • 2023-24 2024-25
  • ಉ.ಪ್ರದೇಶ 1.74 ಕೋಟಿ 1.52 ಕೋಟಿ 21.83
  • ಬಿಹಾರ 1.79 ಕೋಟಿ 1.73 ಕೋಟಿ 6.14
  • ರಾಜಸ್ಥಾನ 62.65 ಲಕ್ಷ 57.02 ಲಕ್ಷ 5.63
  • ಪ.ಬಂಗಾಳ 1.17 ಕೋಟಿ 1.13 ಕೋಟಿ 4.01
  • ಕರ್ನಾಟಕ 43.49 ಲಕ್ಷ 41.33 ಲಕ್ಷ 2.15
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net