ಸಮಾನ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಒಲವು; 2024ರ ಲೋಕಸಭಾ ಚುನಾವಣೆಗೂ ಮೊದಲೇ ಅನುಷ್ಠಾನ ಸಾಧ್ಯತೆ

dfgseet
Published on

ನವದೆಹಲಿ: ದೇಶಾದ್ಯಂತ 2024ರ ಲೋಕಸಭಾ ಚುನಾವಣೆಗೂ ಮುನ್ನ ಸಮಾನ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಒಲವು ಹೊಂದಿದ್ದಾರೆ. ಉತ್ತರಾಖಂಡದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವುದಾಗಿ ಚುನಾವಣಾ ಪೂರ್ವದಲ್ಲೇ ಬಿಜೆಪಿ ಘೋಷಿಸಿತ್ತು. ಪುಷ್ಕರ್ ಸಿಂಗ್ ಧಾಮಿ ಮುಖ್ಯಮಂತ್ರಿಯಾಗಿ ಮರುಆಯ್ಕೆಯಾದ ನಂತರ ಈ ಕುರಿತು ಸಮಿತಿ ರಚನೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶ ಸರ್ಕಾರ ಕೂಡ ಸಮಾನ ನಾಗರಿಕ ಸಂಹಿತೆ ಜಾರಿಯ ಸುಳಿವು ನೀಡಿದೆ. ಎರಡು ದಿನದ ಹಿಂದೆ ಹಿಮಾಚಲ ಪ್ರದೇಶ ಸರ್ಕಾರ ಕೂಡ ಇಂಥದ್ದೇ ಮಾತನ್ನು ಆಡಿದೆ. ಈ ವರ್ಷದ ಅಂತ್ಯಕ್ಕೆ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಉತ್ತರಾಖಂಡದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯ ಪರಿಣಾಮವನ್ನು ನೋಡಿಕೊಂಡು ಈಶಾನ್ಯ ರಾಜ್ಯಗಳು ತದನಂತರ ರಾಷ್ಟ್ರವ್ಯಾಪಿ ವಿಸ್ತರಣೆ ಮಾಡುವ ಇರಾದೆಯನ್ನು ಬಿಜೆಪಿ ಇರಿಸಿಕೊಂಡಿದೆ. ಉತ್ತರಾಖಂಡದಲ್ಲಿ ಕರಡು ಮಸೂದೆ ಸಿದ್ಧವಾದ ಬಳಿಕ ರಾಷ್ಟ್ರಮಟ್ಟದಲ್ಲಿ ಸಮಾನ ನಾಗರಿಕ ಸಂಹಿತೆ ಮಸೂದೆಯನ್ನು ಸಿದ್ಧಪಡಿಸಲು ಬಿಜೆಪಿ ಬಯಸಿದೆ. ಈ ರೀತಿಯ ಆಶಯವು ಮಧ್ಯಪ್ರದೇಶದ ಭೋಪಾಲ್​ನಲ್ಲಿ ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ವ್ಯಕ್ತವಾಗಿದೆ. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಭಾಗಿಯಾಗಿದ್ದರು.

ನಾಲ್ಕು ದಶಕದ ಆಶ್ವಾಸನೆ: ಬಿಜೆಪಿ ನಾಲ್ಕು ದಶಕಗಳಿಂದ ತನ್ನ ಪ್ರಣಾಳಿಕೆಯಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಸಮಾನ ನಾಗರಿಕ ಸಂಹಿತೆ ಜಾರಿಯನ್ನು ಹೇಳಿಕೊಂಡು ಬಂದಿತ್ತು. ಈ ಪೈಕಿ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೇ ಅವಧಿಗೆ ಆಯ್ಕೆಯಾದ ಕೆಲ ತಿಂಗಳಲ್ಲೇ ನೆರವೇರಿಸಿತ್ತು. ಸುಪ್ರೀಂಕೋರ್ಟ್ ತೀರ್ಪು ರಾಮಮಂದಿರ ಪರವಾಗಿ ಹೊರ ಬಿದ್ದ ನಂತರ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದು 2024ರ ಚುನಾವಣೆಗೂ ಮೊದಲು ಲೋಕಾರ್ಪಣೆ ಆಗುವ ನಿರೀಕ್ಷೆ ಇದೆ. ಹೀಗಾಗಿ ಬಿಜೆಪಿ ತನ್ನ ಪ್ರಧಾನ ಮೂರು ಆಶ್ವಾಸನೆಯಲ್ಲಿ ಕೊನೆಯದ್ದನ್ನು 2024ರ ಲೋಕಸಭಾ ಚುನಾವಣೆಗೂ ಪೂರ್ವದಲ್ಲಿ ಈಡೇರಿಸಲು ಬಯಸಿದೆ.

ಈ ಮೂಲಕ ನರೇಂದ್ರ ಮೋದಿ ಸರ್ಕಾರ ಹ್ಯಾಟ್ರಿಕ್ ಆಯ್ಕೆಯ ನಿರೀಕ್ಷೆಯನ್ನು ಖಾತ್ರಿಗೊಳಿಸಿಕೊಳ್ಳಲು ಬಯಸಿದೆ. ಬಿಜೆಪಿಯ ಸೈದ್ಧಾಂತಿಕ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದು ಪರಿಷತ್​ಗಳು ಅಯೋಧ್ಯೆ ಹೋರಾಟದ ನಂತರ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನ ಚಳವಳಿಯನ್ನು ಕೈಗೆತ್ತಿಕೊಂಡಿದೆ. ಈ ಕುರಿತ ಕಾನೂನು ಹೋರಾಟ ಈಗಾಗಲೇ ಆರಂಭವಾಗಿದೆ. ಮುಂದಿನ ವರ್ಷಗಳಲ್ಲಿ ಕಾಶಿಯ ಜ್ಞಾನವ್ಯಾಪಿ ಮಸೀದಿ ಮತ್ತು ವಿಶ್ವನಾಥ ದೇವಾಲಯದ ವಿವಾದವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

2019ರ ಚುನಾವಣೆಯಲ್ಲಿ ಬಿಜೆಪಿಗೆ ಬಲಿಷ್ಠ ಬೆಂಬಲ ದೊರಕಿದ ನಂತರ ಪಕ್ಷ ತನ್ನ ಹಿಂದು ರಾಷ್ಟ್ರವಾದದ ಕಾರ್ಯತಂತ್ರವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದೆ. ಜತೆಗೆ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡಿದೆ ಎಂದು ಕೆಲವು ಟೀಕಾಕಾರರು ಟಿಪ್ಪಣಿ ಮಾಡಿದ್ದಾರೆ. ಆದರೆ, ಇದನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಉತ್ತರಾಖಂಡದ ಸಚಿವ ಧನ್​ಸಿಂಗ್ ರಾವತ್, ಸಮಾನ ನಾಗರಿಕ ಸಂಹಿತೆ ಜಾರಿಯು ಯಾವುದೇ ಒಂದು ಸಮುದಾಯವನ್ನು ಗಮನದಲ್ಲಿ ಇಟ್ಟುಕೊಂಡಿದ್ದಲ್ಲ. ಇದರ ಜಾರಿ ಕುರಿತ ನಿಯಮದ ಚೌಕಟ್ಟನ್ನು ಜಸ್ಟೀಸ್ ನೇತೃತ್ವದ ಸಮಿತಿ ರೂಪಿಸಲಿದೆ ಎಂದಿದ್ದಾರೆ.

ವಿವಾಹ-ಉತ್ತರದಾಯಿತ್ವದಲ್ಲಿ ಏಕರೂಪ ಕಾನೂನು: ವಿವಾಹ, ವಿಚ್ಚೇದನ, ದತ್ತು ಸ್ವೀಕಾರ ಮತ್ತು ಉತ್ತರದಾಯಿತ್ವದಲ್ಲಿ ಧರ್ಮದ ಆಧಾರದಲ್ಲಿ ಕಾನೂನುಗಳು ಇವೆ. ಇದು ಸಮಾನತೆಯ ಆಶಯಕ್ಕೆ ವಿರುದ್ಧವಾದ ಕಾರಣ ಸಂವಿಧಾನ ನಿರ್ವತೃಗಳು ಸಮಾನ ನಾಗರಿಕ ಸಂಹಿತೆ ಅಗತ್ಯವನ್ನು ಅದರ ಪೀಠಿಕೆ ಭಾಗದಲ್ಲಿ ಒತ್ತಿ ಹೇಳಿದ್ದಾರೆ. ಆದರೆ, ಏಳೂವರೆ ದಶಕದಿಂದ ಯಾವ ಸರ್ಕಾರವೂ ಇದನ್ನು ಜಾರಿ ಮಾಡುವ ಧೈರ್ಯ ತೋರಿಲ್ಲ. ಇದರ ಜಾರಿಯಿಂದ ಅಲ್ಪಸಂಖ್ಯಾತ ವರ್ಗಗಳು ಬೆಂಬಲ ಕಳೆದುಕೊಳ್ಳುವ ಆತಂಕ ಪಕ್ಷಗಳಿಗೆ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net