ಕೇಂದ್ರ ಬಜೆಟ್ 2025: ಅತಿವೃಷ್ಟಿಯೋ ದೂರದೃಷ್ಟಿಯೋ? ನಿರೀಕ್ಷೆ ನೂರಾರು, ನಿರ್ಮಲಾ ಎದುರಿದೆ ಸರಣಿ ಸವಾಲು

ವಿಜಯವಾಣಿ (1)
Published on

ನವದೆಹಲಿ: ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿರುವ ಜಿಡಿಪಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಾಗತಿಕ ರಾಜಕೀಯ ಸನ್ನಿವೇಶ, ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದ ಭವಿಷ್ಯದ ಮೇಲೆ ಗೋಚರಿಸಿರುವ ಹಣದುಬ್ಬರದ ಅಪಾಯಗಳ ಸರಣಿ ಸವಾಲುಗಳ ನಡುವೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ದಾಖಲೆಯ 8ನೇ ಬಜೆಟ್ ಮಂಡಿಸಲಿದ್ದಾರೆ.

ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗುವ ಸಂಕಲ್ಪ ತೊಟ್ಟಿರುವ ಕೇಂದ್ರ ಸರ್ಕಾರಕ್ಕೆ ಕನಸು ನನಸು ಮಾಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಇದೆ. ಈ ಗುರಿ-ಸವಾಲುಗಳ ನಡುವೆ ವಿಶ್ವದ ಬೃಹತ್ ರಾಷ್ಟ್ರಗಳು ಭಾರತದಲ್ಲಿ ಹೂಡಿಕೆಗೆ ಮುಂದಾಗಿರುವುದು ತುಸು ನೆಮ್ಮದಿ ತಂದಿದೆ. ಜತೆಗೆ ಉದ್ಯೋಗ ಸೃಷ್ಟಿ ಸಂಕಲ್ಪ ಈಡೇರುವ ಆಶಾಕಿರಣ ಮೂಡಿಸಿದೆ. ಇವೆಲ್ಲವನ್ನೂ ಸರಿದೂಗಿಸಿಕೊಂಡು ನಿರ್ಮಲಾ ಘೋಷಣೆಗಳ ಅತಿವೃಷ್ಟಿ ಹರಿಸುವರೋ, ದೂರದೃಷ್ಟಿಯ ಆಯವ್ಯಯ ಮಂಡಿಸು ವರೋ ಎಂಬ ಕುತೂಹಲ ದೇಶದ ಜನರಲ್ಲಿ ಗರಿಗೆದರಿದೆ.

ಕರ್ನಾಟಕದ ಕೋರಿಕೆಗಳೇನು?

ಬೆಂಗಳೂರು: ಕೇಂದ್ರದ ಬಜೆಟ್ ಮೇಲೆ ಕರ್ನಾಟಕ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ಪ್ರತ್ಯೇಕವಾಗಿ ಕೇಂದ್ರದ ಮುಂದೆ ಬೇಡಿಕೆ ಸಲ್ಲಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳಿಗೆ ಕೇಂದ್ರ ಸರ್ಕಾರ ಐದು ಸಾವಿರ ಕೋಟಿ ರೂ. ಕೊಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದು ಒತ್ತಾಯಿಸಿದ್ದರು. ಜತೆಗೆ ಸಿಎಂ ಕೂಡ ಅದೇ ಭಾವನೆ ವ್ಯಕ್ತಪಡಿಸಿದ್ದಾರೆ. ಪಶ್ಚಿಮಘಟ್ಟದ ಸಂರಕ್ಷಣೆಗಾಗಿ ಮಲೆನಾಡು ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ 5 ವರ್ಷಗಳ ಅವಧಿಗೆ 10,000 ಕೋಟಿ ರೂ. ಅನುದಾನ ಘೊಷಿಸಬೇಕು.

ಜನಸಾಮಾನ್ಯರ ನಿರೀಕ್ಷೆ

  • ಆದಾಯ ತೆರಿಗೆಗೆ ಕನಿಷ್ಠ 10 ಲಕ್ಷ ರೂ. ಮಿತಿ, 15 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ತಗ್ಗಿಸಬೇಕು.
  • ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಗರಿಷ್ಠ ಕಡಿತ ಮಿತಿ 50 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಿಸಬೇಕು, ತೆರಿಗೆ ವಿನಾಯಿತಿ ನೀಡಬೇಕು.
  • ಹಣದುಬ್ಬರ ಪ್ರಮಾಣ ಹೆಚ್ಚಿರುವುದರಿಂದ ದ್ವಿತೀಯ ಹಂತದ ನಗರಗಳಿಗೆ ಮನೆಬಾಡಿಗೆ ಭತ್ಯೆಯನ್ನು ಶೇ.50 ಹೆಚ್ಚಿಸಬೇಕು.
  • ಭವಿಷ್ಯ ನಿಧಿ ಮೇಲಿನ ಬಡ್ಡಿ 2.5 ಲಕ್ಷ ರೂ. ಮೀರಿದಲ್ಲಿ ವಿಧಿಸಲಾಗುವ ಟಿಡಿಎಸ್ ಅನ್ನು ಹಣ ಹಿಂಪಡೆಯುವವರೆಗಾದರೂ ಕಡಿತ ಮಾಡಬಾರದು.
  • ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆಗೆ ಸೆಕ್ಷನ್ 80ಡಿ ಅಡಿ ತೆರಿಗೆ ಮಿತಿಯನ್ನು 25 ಸಾವಿರದಿಂದ 50 ಸಾವಿರ ರೂ.ಗೆ ಹಾಗೂ 50 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಿಸಬೇಕು.
  • 80ಸಿ ಸೆಕ್ಷನ್​ನಲ್ಲಿ ಬದಲಾವಣೆ ಮಾಡಬೇಕೆಂಬ ಆಗ್ರಹ ಕೆಲ ವರ್ಷಗಳಿಂದ ಮಧ್ಯಮ ವರ್ಗದವರಿಂದ ಕೇಳಿಬರುತ್ತಿದೆ.

2023-24ರ ಕೇಂದ್ರ ಬಜೆಟ್​ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಆದ್ಯತೆ ನೀಡಿಲ್ಲ. 5,300 ಕೋಟಿ ರೂ. ಘೊಷಣೆ ಮಾಡಿದ್ದರು. ಆದರೆ ಈವರೆಗೆ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ಕಳೆದ ವರ್ಷ ನೀಡಲಾಗಿದ್ದ 5,800 ಕೋಟಿ ರೂ.ಗಳನ್ನು ಈ ವರ್ಷ 2345 ಕೋಟಿ ರೂ.ಗೆ ಇಳಿಸಿದ್ದಾರೆ. | ಸಿದ್ದರಾಮಯ್ಯ ಸಿಎಂ

ಆರ್ಥಿಕ ಸಮೀಕ್ಷೆ ಮುಖ್ಯಾಂಶ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಸತ್​ನಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಿದರು. ಪ್ರಸಕ್ತ ಹಣಕಾಸು ವರ್ಷ(2024-25)ದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ.6.4 ರಷ್ಟಿದೆ, 2025-26ರಲ್ಲಿ ಶೇ.6.3ರಿಂದ ಶೇ.6.8 ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net