2024ರಲ್ಲಿ ವಿಚ್ಛೇದನ ಘೋಷಿಸಿದ ಐದು ಸೌತ್ ಸೆಲೆಬ್ರಿಟಿ ಜೋಡಿ ಇವರೇ ನೋಡಿ!

ವಿಜಯವಾಣಿ - 2024-11-21T161131.233
Published on

ಬೆಂಗಳೂರು: ಬೆಳ್ಳಿ ಪರದೆಯ ಮೇಲೆ ತಮ್ಮ ನೆಚ್ಚಿನ ನಟ-ನಟಿ, ಕಲಾವಿದರನ್ನು ಮೆಚ್ಚಿಕೊಳ್ಳುವ ಸಿನಿಪ್ರೇಕ್ಷಕರು, ಅವರು ಮಾಡಿದ ಸಿನಿಮಾ, ಸಂಗೀತ ಅಥವಾ ಇತರೆ ಒಳ್ಳೊಳ್ಳೆ ವಿಚಾರಗಳನ್ನು ಶ್ಲಾಘಿಸಿ, ಅಭಿಮಾನ ತೋರುತ್ತಾರೆ. ತಾವು ಇಷ್ಟ ಪಡುವ ಸೆಲೆಬ್ರಿಟಿಗಳನ್ನು ಹೆಚ್ಚಾಗಿ ಜಾಲತಾಣಗಳಲ್ಲಿ ಅನುಸರಿಸುವ ಅಭಿಮಾನಗಳು, ಅವರ ಖಾಸಗಿ ಜೀವನ ಸೇರಿದಂತೆ ಹಲವು ವಿಷಯಗಳನ್ನು ತಿಳಿದುಕೊಳ್ಳಲು ಬಹಳ ಕುತೂಹಲ ಹೊಂದಿರುತ್ತಾರೆ. ನಟ-ನಟಿಯರ ಚಿತ್ರ, ಪ್ರೀತಿ, ಮದುವೆ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಆಸಕ್ತಿ ವ್ಯಕ್ತಪಡಿಸುತ್ತಾರೆ. ಆದರೆ, ಅವರ ಖಾಸಗಿ ಬದುಕಿನಲ್ಲಿ ದೊಡ್ಡ ಬಿರುಕು ಮೂಡಿದಾಗ ಎಲ್ಲಿಲ್ಲದ ಆಶ್ಚರ್ಯ ಹೊರಹಾಕುತ್ತಾರೆ. ಅಂತಹ ಭಾವನೆಗಳು ಮೂಡುವುದು ಲವ್ ಬ್ರೇಕಪ್​ ಅಥವಾ ವಿಚ್ಛೇದನ ಸುದ್ದಿಗಳಿಂದಲೇ ಹೆಚ್ಚು ಎಂದೇ ಹೇಳಬಹುದು.

ಸಾಮಾಜಿಕ ಜಾಲತಾಣದಲ್ಲಿ ತಾವು ಇಚ್ಛಿಸುವ ಕಲಾವಿದರನ್ನು ಅನುಸರಿಸುವ ಸಿನಿಪ್ರಿಯರು, ಅವರು ನೀಡುವ ಹೊಸ ಹೊಸ ಮಾಹಿತಿಗಳಿಗಾಗಿ ಕಾಯುತ್ತಿರುತ್ತಾರೆ. ಹಿಂದೆಲ್ಲಾ ಕೇವಲ ತಮ್ಮ ಸಿನಿಮಾಗಳ ಸಂಗತಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಷಯ ಅಥವಾ ಯಾವುದಾದರೂ ಸುಂದರ ತಾಣಕ್ಕೆ ಪ್ರವಾಸ ಹೋದರೆ, ಅದಕ್ಕೆ ಸಂಬಂಧಿಸಿದಂತೆ ಫೋಟೋ, ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಸ್ಟಾರ್​ಗಳು, ಇತ್ತೀಚಿನ ದಿನಗಳಲ್ಲಿ ತಮ್ಮ ದಾಂಪತ್ಯ ಸಂಬಂಧ ಮುರಿದುಬಿದ್ದರೆ, ಆ ವಿಷಯವನ್ನೂ ಸಹ ಬಹಳ ಮುಕ್ತವಾಗಿ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಸದ್ಯ ಈ ಸಾಲಿಗೆ ಪ್ರಸಕ್ತ ವರ್ಷದಲ್ಲಿ ಐದು ಸ್ಟಾರ್​ ಜೋಡಿಗಳು ಸೇರಿದ್ದಾರೆ.

ಜಯಂ ರವಿ- ಆರತಿ

ಸೆಪ್ಟೆಂಬರ್‌ನಲ್ಲಿ ತಮಿಳು ನಟ ಜಯಂ ರವಿ ತಮ್ಮ ಪತ್ನಿ ಆರತಿಯಿಂದ ದೂರವಾಗುವುದಾಗಿ ಖಚಿತಪಡಿಸಿದರು. ಈ ಬಗ್ಗೆ ಎಕ್ಸ್‌ನಲ್ಲಿ (ಟ್ವಿಟರ್​) ಸುದೀರ್ಘವಾಗಿ ಬರೆದುಕೊಂಡ ನಟ, "ಬಹಳಷ್ಟು ಚಿಂತನೆ, ಆಲೋಚನೆಗಳು ಮತ್ತು ಚರ್ಚೆಗಳ ಬಳಿಕ ನಾನು ಆರತಿಯೊಂದಿಗೆ ದಾಂಪತ್ಯ ಜೀವನ ಮುರಿದುಕೊಳ್ಳಲು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ" ಎಂದು ಬಹಿರಂಗಪಡಿಸಿದರು. ಈ ವಿಚಾರ ಕಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡುವುದರ ಜತೆಗೆ ವಿವಾದಕ್ಕೂ ಕಾರಣವಾಗಿತ್ತು.

ಜಿವಿ ಪ್ರಕಾಶ್​- ಸೈಂಧವಿ

ಸಂಗೀತ ಸಂಯೋಜಕ, ನಟ ಜಿವಿ ಪ್ರಕಾಶ್ ಕುಮಾರ್, ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಪತ್ನಿ ಸೈಂಧವಿ ಅವರಿಗೆ ವಿಚ್ಛೇದನ ನೀಡಿದರು. ಮದುವೆಯಾದ 11 ವರ್ಷಗಳ ನಂತರ ದಂಪತಿಗಳು ತಮ್ಮ ಸಂಬಂಧವನ್ನು ಪರಸ್ಪರ ಒಪ್ಪಿಗೆಯ ಮೇರಗೆ ಅಂತ್ಯವಾಡಿದರು. ಡಿವೋರ್ಸ್​ ಸುದ್ದಿಯನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುವ ಮುಖೇನ ಅಭಿಮಾನಿಗಳಿಗೆ ತಿಳಿಸಿದರು.

ಯುವ ರಾಜ್​ಕುಮಾರ್​-ಶ್ರೀದೇವಿ

ಕನ್ನಡ ಚಿತ್ರನಟ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ತಮ್ಮ ವಕೀಲರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪರಸ್ಪರ ಒಬ್ಬರ ವಿರುದ್ಧ ಮತ್ತೊಬ್ಬರು ಗಂಭೀರ ಆರೋಪಗಳನ್ನು ಮಾಡಿದ ನಂತರ ಈ ವರ್ಷದ ಆರಂಭದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಇದಾದ ಬಳಿಕ ಶ್ರೀದೇವಿ ಜಾಲತಾಣದ ಖಾತೆಯಲ್ಲಿ ತಮ್ಮ ಹೇಳಿಕೆಯನ್ನು ಹಂಚಿಕೊಂಡು, ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂಬುದನ್ನು ನಾನು ನಂಬಿದ್ದೇನೆ ಎಂದು ಬರೆದಿದ್ದಾರೆ.

ಭಾಮಾ ಮತ್ತು ಅರುಣ್​ ಜಗದೀಶ್​

ಮಲಯಾಳಂ ತಾರೆ ಭಾಮಾ ಕೂಡ ಈ ವರ್ಷ ಉದ್ಯಮಿ ಅರುಣ್ ಜಗದೀಶ್ ಅವರೊಂದಿಗಿನ ವಿವಾಹವನ್ನು ಕೊನೆಗೊಳಿಸಿರುವುದಾಗಿ ವರದಿಯಾಗಿದೆ. ತಮ್ಮ ಮಗುವಿನೊಂದಿಗಿರುವ ಫೋಟೋವನ್ನು ಮಾತ್ರ ಹಂಚಿಕೊಂಡ ನಟಿ, ನಾನು ಎಷ್ಟು ಬಲಶಾಲಿ ಎಂದು ನನಗೆ ತಿಳಿದಿರಲಿಲ್ಲ. ಒಂದು ಮಗುವಿನ ತಾಯಿ ಮತ್ತು ಬಲಶಾಲಿಯಾಗಿರುವುದು ಮಾತ್ರ ನನ್ನ ಏಕೈಕ ಆಯ್ಕೆಯಾಗಿದೆ ಎಂದು ಬರೆದುಕೊಂಡರು. ಈ ಪೋಸ್ಟ್​ ತಮ್ಮ ಪತಿಯೊಂದಿಗಿನ ಸಂಬಂಧ ಕಡಿದುಕೊಳ್ಳುವುದನ್ನು ದೃಢಪಡಿಸಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು.

ಎ.ಆರ್. ರೆಹಮಾನ್ ಮತ್ತು ಸೈರಾ ಬಾನು

29 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆಗೂ ಗುಡ್​ಬೈ ಹೇಳಿದ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್, ತಮ್ಮ ಪತ್ನಿ ಸೈರಾ ಬಾನು ಅವರಿಗೆ ವಿಚ್ಛೇದನ ನೀಡಿದ್ದಾರೆ. ಈ ವಿಷಯ ಹೊರಬಿದ್ದ ಕೂಡಲೇ ಅವರ ಅಪಾರ ಸಂಖ್ಯೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಇದು ನಡೆಯಬಾರದಿತ್ತು ಎಂದು ಜಾಲತಾಣಗಳಲ್ಲಿ ಅಭಿಪ್ರಾಯಿಸಿದ್ದಾರೆ. 29 ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದ ದಂಪತಿಗಳು ಇದೀಗ ತಮ್ಮ ವೈವಾಹಿಕ ಜೀವನವನ್ನು ಮುರಿದುಕೊಂಡಿದ್ದು, ಸದ್ಯ ಅಭಿಮಾನಿಗಳಲ್ಲಿ ಭಾರೀ ಗೊಂದಲ ಉಂಟುಮಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net