ನಿಂತಿಕಲ್ಲಿನಲ್ಲಿ ಮಾಸ್ ಅಡಕೆ ಖರೀದಿ ಕೇಂದ್ರ : ಕೆ.ಸೀತಾರಾಮ ರೈ ಸವಣೂರು ಮಾಹಿತಿ

Published on

ಸುಳ್ಯ: ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಾಸ್ ಲಿಮಿಟೆಡ್ ವತಿಯಿಂದ ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿಂತಿಕಲ್ಲು ಸಹಯೋಗದಲ್ಲಿ, ಸಹಕಾರರತ್ನ ಎಂ.ಎನ್.ರಾಜೇಂದ್ರಕುಮಾರ್ ಸಹಕಾರದೊಂದಿಗೆ ಅಡಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ನ.25ರಂದು ನಿಂತಿಕಲ್ಲಿನ ಸಾಧನಾ ಸಹಕಾರಿ ಸೌಧದಲ್ಲಿ ನಡೆಯಲಿದೆ ಎಂದು ಮಂಗಳೂರು ಮಾಸ್ ಲಿಮಿಟೆಡ್ ಅಧ್ಯಕ್ಷ ಸಹಕಾರಿ ರತ್ನ ಕೆ.ಸೀತಾರಾಮ ರೈ ಸವಣೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಅಡಕೆ ದರ 2001ರಲ್ಲಿ ಕಿಲೋನ ಬೆಲೆ 30-35ರೂ.ವರೆಗೆ ಕುಸಿದಾಗ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿಗಳ ಮತ್ತು ಬೆಳೆಗಾರರ ಚಿಂತನೆ ಮೂಲಕ ಮಾಸ್ ಲಿಮಿಟೆಡ್ ಸಂಸ್ಥೆ ಪ್ರಾರಂಭಗೊಂಡಿತು. ಸಹಕಾರಿ ರತ್ನ ವಾರಣಾಸಿ ಸುಬ್ರಾಯ ಭಟ್ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದೊಂದಿಗೆ ಜಿಲ್ಲೆಯ ಸಹಕಾರಿಗಳು ಮತ್ತು ಅಡಕೆ ಬೆಳೆಗಾರರು ಸೇರಿ ಮಾಸ್ ಲಿಮಿಟೆಡ್ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಪ್ರಕೃತ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಂಸ್ಥೆಯು ಹತ್ತು ಖರೀದಿ ಕೇಂದ್ರಗಳನ್ನು ಹೊಂದಿದ್ದು, ಪ್ರತಿದಿನವೂ ಸದಸ್ಯ ಕೃಷಿಕರ ಅಡಕೆಯನ್ನು ಖರೀದಿಸುತ್ತಿದೆ ಎಂದರು.

ಮಾಸ್ ಲಿಮಿಟೆಡ್ ನಿರ್ದೇಶಕರಾದ ಸಹಕಾರಿರತ್ನ ನಿತ್ಯಾನಂದ ಮುಂಡೋಡಿ, ರಾಜೀವಿ ರೈ ಬೆಳ್ಳಾರೆ, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಭಟ್, ಮಾರ್ಕೆಟಿಂಗ್ ಅಧಿಕಾರಿ ಲೋಕೇಶ್, ಕೃಷಿಕ ಬಾಪು ಸಾಹೇಬ್ ಸುಳ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net