

ಮೂರು ದಶಕಗಳ ನಂತರ ಸಕ್ಕರೆನಾಡು ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ. ಇಂದಿನಿಂದ ಮೂರು ದಿನಗಳ ಕಾಲ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇದರ ಯಶಸ್ಸಿಗಾಗಿ ಸಕಲ ತಯಾರಿಗಳು ಪೂರ್ಣಗೊಂಡಿವೆ. ನಾಡಿನಾದ್ಯಂತದಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಆಗಮಿಸಲಿದ್ದು, ಕನ್ನಡ ವಾತಾವರಣ ಮೈದಳೆಯಲಿದೆ. ಸಮ್ಮೇಳನ ಅಂಗವಾಗಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ಇವು ಹೊಸ ಹೊಳಹು ಚೆಲ್ಲಲೆಂಬುದು ಸಹಜ ನಿರೀಕ್ಷೆ. ನಾಡು-ನುಡಿ ಬಗ್ಗೆ ಕಾಳಜಿ ಮತ್ತು ತಮ್ಮದೇ ಆದ ಪರಿಕಲ್ಪನೆ ಹೊಂದಿರುವ ಪ್ರಸಿದ್ಧ ಜಾನಪದ ಸಾಹಿತಿ, ಹಿರಿಯ ವಿದ್ವಾಂಸ ಡಾ. ಗೊ.ರು. ಚನ್ನಬಸಪ್ಪ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪಿಸಬಹುದಾದ ಸಂಗತಿಗಳ ಬಗ್ಗೆ ಕುತೂಹಲವಿದೆ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ‘ನುಡಿಜಾತ್ರೆ’ ಎಂದೂ ಕರೆಯುವುದು ವಾಡಿಕೆ. ಜಾತ್ರೆಯ ಎಲ್ಲ ಲಕ್ಷಣಗಳೂ ಇಲ್ಲಿರುತ್ತವೆ. ಹಾಗೆಯೇ ಇದು ಕನ್ನಡ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳ ಸಮ್ಮಿಲನದ ವೇದಿಕೆಯೂ ಹೌದು. ಸಮ್ಮೇಳನ ಪ್ರತಿ ವರ್ಷ ನಡೆಯುವುದು ಹೌದಾದರೂ, ಪ್ರತಿ ಸಮ್ಮೇಳನವೂ ವಿಭಿನ್ನ, ವಿಶಿಷ್ಟ.
ಕನ್ನಡ ಭಾಷೆ ವರ್ತಮಾನದಲ್ಲಿ ಎದುರಿಸುತ್ತಿರುವ ಸವಾಲುಗಳು, ಆತಂಕಗಳ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ರಚನಾತ್ಮಕ ಚರ್ಚೆ ನಡೆದು, ಅರ್ಥಪೂರ್ಣ ನಿರ್ಣಯಗಳು ಹೊರಹೊಮ್ಮಬೇಕು ಮತ್ತು ಸಾಹಿತ್ಯಲೋಕದ ಭಾವನೆಗಳಿಗೆ ಆಳುಗರು ಸ್ಪಂದಿಸಬೇಕು ಎಂಬುದು ಪ್ರತಿಯೊಬ್ಬ ಕನ್ನಡಾಭಿಮಾನಿಯ ಹಂಬಲ. ಶಿಕ್ಷಣ ಮಾಧ್ಯಮ ಯಾವುದಿರಬೇಕು ಎಂಬ ಗೊಂದಲ ಇನ್ನೂ ಮುಂದುವರಿದಿದೆ. ಇಂಗ್ಲಿಷ್ ಭಾಷೆಯ ಪ್ರಾಬಲ್ಯವನ್ನು ಪರಿಣಾಮಕಾರಿಯಾಗಿ ಎದುರಿಸುವುದು ಹೇಗೆ ಎಂಬ ಸವಾಲಿದೆ. ಹೊಸ ಪೀಳಿಗೆ ಕನ್ನಡದಿಂದ ದೂರವಾಗುತ್ತಿದೆ ಎಂಬ ಆತಂಕವಿದೆ. ಇನ್ನೊಂದೆಡೆ, ಸಾಮಾಜಿಕವಾಗಿಯೂ ಕನ್ನಡ ಭಾಷೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಬದ್ಧತೆಯನ್ನು ನಿರ್ವಹಿಸಬೇಕಿದೆ. ನೆಲ-ಜಲದ ವಿಚಾರದಲ್ಲಿಯೂ ಕರ್ನಾಟಕ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಮಸ್ಯೆ-ಗೊಂದಲಗಳನ್ನು ಪರಿಹರಿಸುವಲ್ಲಿ ಸರ್ಕಾರದ ಪಾತ್ರ ಬಹುಮುಖ್ಯವಾದುದು. ಆದರೆ ಸರ್ಕಾರ ಒಂದು ನಿರ್ಧಾರಕ್ಕೆ ಬರುವಲ್ಲಿ, ನೀತಿನಿಯಮ ರೂಪಿಸುವಲ್ಲಿ ಸಾಹಿತ್ಯ, ಸಾಂಸ್ಕೃತಿಕ ಲೋಕದ ಸಲಹೆ- ಸಹಕಾರಗಳೂ ಅಗತ್ಯವಾಗುತ್ತವೆ. ಸಾಹಿತ್ಯ ಸಮ್ಮೇಳನ ಈ ನಿಟ್ಟಿನಲ್ಲಿಯೂ ಮುಖ್ಯವಾಗುತ್ತದೆ. ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವ ಜತೆಗೆ, ಅವುಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕನ್ನಡ ನೆಲ-ಜಲ-ಭಾಷೆ-ಸಂಸ್ಕೃತಿ ಇತ್ಯಾದಿ ವಿಚಾರಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಅದರದೇ ಆದ ಮಹತ್ವವಿದೆ, ತೂಕವಿದೆ. ಮಂಡ್ಯ ಸಮ್ಮೇಳನ ಈ ದಿಕ್ಕಿನಲ್ಲಿ ಅರ್ಥಪೂರ್ಣವಾಗಿ ಹೊರಹೊಮ್ಮಲಿ. ಭಾಷೆ, ಸಂಸ್ಕೃತಿ ಬಗೆಗೆ ಹೊಸ ಆಶಾವಾದ ಬಿತ್ತಲಿ, ಜನರಲ್ಲಿನ ಕನ್ನಡಾಭಿಮಾನವು ಭಾಷಾ ಬೆಳವಣಿಗೆಗೆ ಹೊಸ ದಿಕ್ಸೂಚಿ ಒದಗಿಸಲಿ ಎಂಬುದು ಆಶಯ.