

ಬೆಂಗಳೂರು: ಸಿಡಿ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು, ಯುವತಿ ಆಗೊಂದು ಈಗೊಂದು ವಿಡಿಯೋ ಬಿಡುಗಡೆ ಮಾಡುವುದು ಸರಿಯಲ್ಲ, ಇದರಿಂದ ರಾಜ್ಯದ ಜನ ಹಾಗೂ ಪೊಲೀಸರು ಗೊಂದಲದಲ್ಲಿದ್ದಾರೆ. ಹಾಗಾಗಿ ಯುವತಿ ಹೊರ ಬಂದು ಪೊಲೀಸರ ಎದುರು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸರ ಸೂಕ್ತ ತನಿಖೆಯಿಂದ ಸತ್ಯ ಏನಿದೆ ಎಂಬುದು ರಾಜ್ಯದ ಜನಕ್ಕೆ ಗೊತ್ತಾಗಬೇಕು. ಅಲ್ಲಿವರೆಗೂ ಪ್ರಕರಣಕ್ಕೆ ಮಹತ್ವ ಬರುವುದಿಲ್ಲ ಎಂದ ಅವರು ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೆಸರು ಕೇಳಿ ಬಂದಿರುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋದಲ್ಲಿರುವ ಯುವತಿಯ ಪೋಷಕರನ್ನು ಇಂದು ಎಸ್ಐಟಿ ವಿಚಾರಣೆಗೆ ಒಳಪಡಿಸಿದೆ.
ಆಡುಗೋಡಿ ಬಳಿ ಇರುವ ಎಸ್ಐಟಿ ಟೆಕ್ನಿಕಲ್ ಕಚೇರಿಯಲ್ಲಿ ಯುವತಿಯ ತಂದೆ ಪ್ರಕಾಶ್ ಹಾಗೂ ತಾಯಿ ಮತ್ತು ಸಹೋದರನ್ನು ಸುಮಾರು ನಾಲ್ಕು ತಾಸು ತೀವ್ರ ವಿಚಾರಣೆಗೆ ಒಳಪಡಿಸಿದರು. ಡಿಸಿಪಿ ಅನುಚೇತ್, ರವಿಕುಮಾರ್, ಶರಣಪ್ಪ ಅವರ ನೇತೃತ್ವದ ತಂಡ ವಿಚಾರಣೆಗೆ ಒಳಪಡಿಸಿ, ಸಂಜೆ 5 ಗಂಟೆಗೆ ವಿಚಾರಣೆ ಮುಗಿಸಿದೆ. ಪೋಷಕರ ಹೇಳಿಕೆಗಳನ್ನು ಲಿಖಿತವಾಗಿ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.