

| ಕೇಶವಮೂರ್ತಿ ವಿ.ಬಿ. ಹಾವೇರಿ
ಕರೊನಾ ಕಾರಣಕ್ಕೆ ಎರಡು ವರ್ಷ ಮುಂದೂಡಲ್ಪಟ್ಟಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜ.6, 7 ಮತ್ತು 8ರಂದು ಹಾವೇರಿಯಲ್ಲಿ ಆಯೋಜನೆಗೊಂಡಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಸಾಹಿತ್ಯಾಸಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಭಾರಿ ಬಂದೋಬಸ್ತ್ ಕೈಗೊಂಡಿದೆ. ಈ ಬಾರಿ ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ಸಮ್ಮೇಳನ ನಡೆಯಲಿದೆ.
ಸಮ್ಮೇಳನದ ಆವರಣದಲ್ಲಿ ಇಂಟರ್ನೆಟ್ ಪ್ರೊಟೋಕಾಲ್ ಸೇರಿ ಇತರ ತಂತ್ರಜ್ಞಾನವುಳ್ಳ 70 ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಸಮ್ಮೇಳನದ ನೆನಪಿಗಾಗಿ ವಿಶೇಷವಾಗಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ 40 ಶಾಶ್ವತ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮೆರವಣಿಗೆ ನಡೆಯುವ ದಾರಿ, ನಗರದ ಪ್ರಮುಖ ರಸ್ತೆಗಳು ಹಾಗೂ ಸಮ್ಮೇಳನ ಸ್ಥಳದ ಮೂಲೆ ಮೂಲೆಯಲ್ಲೂ ಸಿಸಿ ಕ್ಯಾಮರಾಗಳ ಮೂಲಕ ಪೊಲೀಸರು ಕಣ್ಗಾವಲು ಇಡಲಿದ್ದಾರೆ.
ಅಕ್ಷರ ಹಬ್ಬದ ಭದ್ರತೆಗಾಗಿ 3,100 ಪೊಲೀಸ್ ಅಧಿಕಾರಿ, ಸಿಬ್ಬಂದಿ ನೇಮಿಸಲಾಗಿದೆ. ಎಸ್ಪಿ ದರ್ಜೆಯ 7 ಮಂದಿ ಸೇರಿ 600 ಅಧಿಕಾರಿಗಳು, 2,000 ಪೊಲೀಸ್ ಸಿಬ್ಬಂದಿ, 1,500 ಗೃಹರಕ್ಷಕರು ದಿನ-ರಾತ್ರಿ ಬಂದೋಬಸ್ತ್ ಒದಗಿಸಲಿದ್ದಾರೆ. ಹುಬ್ಬಳ್ಳಿ-ಧಾರವಾಡ, ಗದಗ, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧ ಜಿಲ್ಲೆಗಳಿಂದ ಖಾಕಿ ಪಡೆ ಆಗಮಿಸಲಿದೆ. ಮೊದಲ ದಿನ ಮೆರವಣಿಗೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಲಕ್ಷಕ್ಕೂ ಅಧಿಕ ಜನ ಭಾಗವಹಿಸುತ್ತಾರೆ. ಹಾಗಾಗಿ, ಇಲಾಖೆ ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ಕೈಗೊಂಡಿದೆ.
ಹೊರಠಾಣೆಯಲ್ಲಿ ವೀಕ್ಷಣೆ: ಸಮ್ಮೇಳನದ ಮುಖ್ಯದ್ವಾರ, ಮುಖ್ಯವೇದಿಕೆ, 2 ಸಮಾನಾಂತರ ವೇದಿಕೆ, ಪುಸ್ತಕ ಹಾಗೂ ವಾಣಿಜ್ಯ ಮಳಿಗೆ, ಊಟದ ಆವರಣ, ಪುಷ್ಪ ಪ್ರದರ್ಶನ, ವಿಐಪಿ ದ್ವಾರ, ಮೀಡಿಯಾ ಗ್ಯಾಲರಿ ಸೇರಿದಂತೆ ಎಲ್ಲ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕ್ಯಾಮರಾಗಳ ಸಂಪರ್ಕವನ್ನು ಮುಖ್ಯ ವೇದಿಕೆ ಎಡಭಾಗದ ಪೊಲೀಸ್ ಹೊರಠಾಣೆಗೆ ಕಲ್ಪಿಸಲಾಗಿದೆ. ಪೊಲೀಸ್ ಇಲಾಖೆ ದೃಶ್ಯಗಳ ಮೇಲೆ ನಿಗಾ ಇಡಲಿದೆ ಎಂದು ಸಿಸೋಪ್ಸ್ ಟೆಕ್ನಾಲಜೀಸ್ ಸಿಇಒ ರಾಘವೇಂದ್ರ ಬಸೂರ ತಿಳಿಸಿದ್ದಾರೆ.
ಸಾಹಿತ್ಯ ಸಮ್ಮೇಳನದ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅಗತ್ಯವಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. 250 ಮಹಿಳಾ ಸಿಬ್ಬಂದಿ ಸೇರಿದಂತೆ 3,100 ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. | ಹನುಮಂತರಾಯ ಎಸ್ಪಿ, ಹಾವೇರಿ ಹೃದಯ ತಜ್ಞರು, ಪಿಜಿಶಿಯನ್, ಅರವಳಿಕೆ ತಜ್ಞರು ಸೇರಿ 330 ವೈದ್ಯಕೀಯ ಸಿಬ್ಬಂದಿ ಸೇವೆಗೆ ಲಭ್ಯರಿರುತ್ತಾರೆ. ಜ್ವರ, ನೆಗಡಿ, ಕೆಮ್ಮು, ಮತ್ತಿತರ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುವುದು. | ಕುಮಾರಸ್ವಾಮಿ ಡಿಎಚ್ಒ, ಹಾವೇರಿ
330 ವೈದ್ಯಕೀಯ ಸಿಬ್ಬಂದಿ, 11 ಆಂಬುಲೆನ್ಸ್: ಸಮ್ಮೇಳನದಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಇಲಾಖೆ 3 ಸುಸಜ್ಜಿತ ವೈದ್ಯಕೀಯ ಸೌಲಭ್ಯ ಹೊಂದಿರುವ ಆಂಬುಲೆನ್ಸ್ ಸೇರಿ 11 ತುರ್ತು ಚಿಕಿತ್ಸಾ ವಾಹನಗಳನ್ನು ಕಾಯ್ದಿರಿಸಿದೆ. ಜತೆಗೆ 30ಕ್ಕೂ ಅಧಿಕ ತಜ್ಞ ವೈದ್ಯರು ಸೇರಿ 330ಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿ ಮೂರು ದಿನ ಸಮ್ಮೇಳನದಲ್ಲಿ ಜನರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಸಮ್ಮೇಳನದ ಸ್ಥಳದಲ್ಲಿ ಒಟ್ಟು ನಾಲ್ಕು ತಾತ್ಕಾಲಿಕ ಕ್ಲಿನಿಕ್ಗಳನ್ನು ತೆರೆಯಲಾಗಿದೆ. ಮುಖ್ಯದ್ವಾರದ ಬಳಿ ಮೂರು ಹಾಗೂ ವಿಐಪಿ ಕೌಂಟರ್ ಬಳಿ ಒಂದು ಕ್ಲಿನಿಕ್ ಲಭ್ಯವಿದೆ. ಧಾರವಾಡದ ಎಸ್ಡಿಎಂ, ಸ್ಪರ್ಶ, ಶಿವಮೊಗ್ಗ ಮೆಡಿಕಲ್ ಕಾಲೇಜು ಸಹಿತ ವಿವಿಧ ಆಸ್ಪತ್ರೆಗಳ 30 ತಜ್ಞ ವೈದ್ಯರ ತಂಡ ಸೇವೆಗೆ ಹಾಜರಾಗಲಿದೆ. ಸಮ್ಮೇಳನಕ್ಕೆ ಬರುವವರಿಗೆ 2 ಲಕ್ಷಕ್ಕೂ ಅಧಿಕ ಮಾಸ್ಕ್ ವಿತರಿಸಲಾಗುತ್ತಿದೆ. ಅಲ್ಲಲ್ಲಿ ಜ್ವರ ತಪಾಸಣೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತಿದೆ. ಸಾಕಷ್ಟು ಔಷಧವನ್ನೂ ಸಂಗ್ರಹಿಸಲಾಗಿದೆ.
ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ: ಸಾಹಿತ್ಯ ಸಮ್ಮೇಳನ ಅಂಗವಾಗಿ ಹಾವೇರಿಯ ಶ್ರೀ ಮಹಾದೇವಪ್ಪ ಮೈಲಾರ ರೈಲು ನಿಲ್ದಾಣದಲ್ಲಿ ವಿವಿಧ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ ಹಾಗೂ ವಿಶೇಷ ರೈಲು ಸಂಚಾರ ಪ್ರಾರಂಭಿಸಲಾಗಿದೆ.