

ನವದೆಹಲಿ: ಸಿಬಿಎಸ್ಇ ಪಠ್ಯಕ್ರಮದಲ್ಲಿ 10 ಮತ್ತು 12ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ. ಈ ಕುರಿತಾಗಿ ಕೇಂದ್ರ ಶಿಕ್ಷಣ ಸಚಿವರಾದ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಟ್ವಿಟ್ಟರ್ನಲ್ಲಿ ಮಾತನಾಡಿದ್ದು, ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದ್ದಾರೆ.
ಮೇ 4ರಿಂದ ಜೂನ್ 10ರವರೆಗೆ ಸಿಬಿಎಸ್ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿದೆ. ಪ್ರಾಕ್ಟಿಕಲ್ ಪರೀಕ್ಷೆಗಳು ಮಾರ್ಚ್ 1ರಿಂದಲೇ ಆರಂಭವಾಗಲಿದೆ. ಜುಲೈ 15ಕ್ಕೆ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಎಲ್ಲ ಪರೀಕ್ಷೆಯನ್ನು ಆಫ್ಲೈನ್ನಲ್ಲಿಯೇ ನಡೆಸಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.
ನಮ್ಮ ದೇಶ ಕರೊನಾ ಹಿನ್ನೆಲೆಯಲ್ಲಿ ಆನ್ಲೈನ್ ಶಿಕ್ಷಣಕ್ಕೆ ಬದಲಾಗಿದೆ. ಅದಕ್ಕಾಗಿ ಹಗಲಿರುಳು ದುಡಿದಿರುವ ಶಿಕ್ಷಕ ವೃಂದಕ್ಕೆ ಅವರು ಧನ್ಯವಾದವನ್ನು ಅರ್ಪಿಸಿದ್ದಾರೆ. ಒನ್ ಕ್ಲಾಸ್ ಒನ್ ಚಾನೆಲ್ ಮೂಲಕ ದೇಶದ ವಿದ್ಯಾರ್ಥಿಗಳಿಗೆ ಮನೆಯ ಟಿವಿಗಳಲ್ಲೇ ಶಿಕ್ಷಣ ಸಿಗುವಂತೆ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಹಿಂದೆ ಸಿಬಿಎಸ್ಇ ಪರೀಕ್ಷೆಯ ಬಗ್ಗೆ ಮಾತನಾಡಿದ್ದ ಅವರು, ಫೆಬ್ರವರಿ ಒಳಗೆ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಕರೊನಾ ಸ್ಥಿತಿಗತಿಯನ್ನು ಅವಲೋಕಿಸಿ ಪರೀಕ್ಷೆಯ ದಿನಾಂಕವನ್ನು ನಿರ್ಧರಿಸುವುದಾಗಿ ತಿಳಿಸಿದ್ದರು. (ಏಜೆನ್ಸೀಸ್)