

ಬೆಂಗಳೂರು: ಇಡೀ ದೇಶದ ಜನ ನೋಡುತ್ತಿದ್ದಾರೆ. ಪಕ್ಷ ಮತ್ತು ನಿಮಗೆ(ಕಾರ್ಯಕರ್ತರು) ಕಳಂಕ ತರುವ ಕೆಲಸವನ್ನು ನಾನು ಮಾಡಿಲ್ಲ. ಉಪ ಚುನಾವಣೆ ಮುಗಿಯುವವರೆಗೂ ಈ ರೇಡ್ ಹೀಗೆ ಮುಂದುವರಿಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಇಂದು(ಸೋಮವಾರ) ಬೆಳ್ಳಂಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ನಿವಾಸ ಸೇರಿ ಕುಟುಂಬ ಆಪ್ತ ವಲಯದ ಒಟ್ಟು 14 ಕಡೆ ಸಿಬಿಐ ದಾಳಿ ನಡೆಸಿದೆ. ಸಂಜೆ 6 ಗಂಟೆವರೆಗೂ ಪರಿಶೀಲಿಸಿದ ಅಧಿಕಾರಿಗಳ ತಂಡ ಹಲವು ದಾಖಲೆಗಳನ್ನು ಕೊಂಡೊಯ್ದಿದೆ. ಸಿಬಿಐ ದಾಳಿ ಖಂಡಿಸಿ ಸಹಸ್ರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿಕೆಶಿ ಅಭಿಮಾನಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತ ಅವರ ನಿವಾಸದ ಬಳಿ ಜಮಾಯಿಸಿದ್ದರು. ರಾಜ್ಯದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಅವರನ್ನೆಲ್ಲ ಉದ್ದೇಶಿಸಿ ಮಾತನಾಡಿದ ಡಿಕೆಶಿ, ನನಗೆ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದು ಭಾವುಕರಾದರು.
ರಾಜ್ಯದಲ್ಲಿ ಮತ್ತು ಹೊರಗಡೆ ನನಗಾಗಿ ಅಭಿಮಾನ ತೋರಿಸಿದ್ದೀರಿ. ನನಗೆ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ನಿಮ್ಮ ಅಭಿಮಾನ ಪ್ರೀತಿ ಮರೆಯಲು ಸಾಧ್ಯವಿಲ್ಲ. ಎಲ್ಲರೂ ಸಮಾಧಾನವಾಗಿ ಇರಿ ಎಂದು ತನ್ನ ನಿವಾಸದ ಬಳಿ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿ ಡಿಕೆಶಿ ಮನವಿ ಮಾಡಿದರು.
ನಾನು ತಪ್ಪು ಮಾಡಿದ್ದರೆ ಹೆದರಿಕೊಳ್ಳಬೇಕು. ಸರ್ಕಾರ ಹೇಳಿದಂಗೆ ಸಿಬಿಐ ಅಧಿಕಾರಿಗಳು ಕೇಳುತ್ತಿದ್ದಾರೆ. ಇದು ಸುಬಿಐ ಕೇಸ್ ಅಲ್ಲ, ಆರ್ಥಿಕ ಅಪರಾಧದ ಕೇಸ್ ಎಂದು ಸರ್ಕಾರದ ವಿರುದ್ಧ ಜರಿದರು. ನನ್ನ ಮನೆಯಲ್ಲಿದ್ದ ಪ್ಯಾಂಟ್, ಸೀರೆ, ಪಂಚೆ ಲೆಕ್ಕ ತೆಗೆದುಕೊಂಡಿದ್ದಾರೆ. ಯಾವುದೇ ಒತ್ತಡಕ್ಕೆ ಹೆದರೋ ಮಗ ನಾನಲ್ಲ ಎಂದು ಗುಡುಗಿದರು.