

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಎಂಬ ಆರೋಪಕ್ಕೆ ಸಚಿವ ಡಾ.ಕೆ. ಸುಧಾಕರ್ ಖಾರವಾಗಿಯೇ ತಿರುಗೇಟು ನೀಡಿದ್ದಾರೆ.
ಸಿಬಿಐ ದಾಳಿ ರಾಜಕೀಯ ಪ್ರೇರಿತವಾಗಿದ್ದರೆ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡಬೇಕಿತ್ತು! ಡಿಕೆಶಿ ಅವರು ಸಿದ್ದರಾಮಯ್ಯಗಿಂತ ದೊಡ್ಡ ನಾಯಕರಲ್ಲ. ಸಿದ್ದರಾಮಯ್ಯ ಸಮುದಾಯದ ನಾಯಕ. ಮಾಜಿ ಮುಖ್ಯಮಂತ್ರಿ ಆಗಿದ್ದವರು. ಆದರೆ ಡಿಕೆಶಿ ಮೇಲೆಯೇ ಏಕೆ ದಾಳಿಯಾಗುತ್ತಿದೆ? ಎಂದು ಮಾತಿನಲ್ಲೇ ತಿವಿದ ಸುಧಾಕರ್, ಐಟಿ, ಇಡಿ, ಸಿಬಿಐ ಇವೆಲ್ಲವೂ ಸ್ವಾಯತ್ತ ಸಂಸ್ಥೆಗಳು. ಡಿಕೆಶಿ ಪ್ರಾಮಾಣಿಕರು ಎಂಬುದನ್ನು ಸಾಬೀತುಪಡಿಸಲು ಇದೊಂದು ಒಳ್ಳೆಯ ಅವಕಾಶ. ತನಿಖೆ ಮೂಲಕ ಸತ್ಯಾಂಶ ಹೊರ ಬೀಳಲಿ ಎಂದರು.
ಇದನ್ನೂ ಓದಿರಿ ಡಿ.ಕೆ.ಶಿವಕುಮಾರ್ ಆಪ್ತನ ಮನೆ ಮೇಲೂ ಸಿಬಿಐ ದಾಳಿ
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅಮಿತ್ ಶಾ ಮೇಲೆ ದಾಳಿ ಮಾಡಿತ್ತು. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನೂ ಜೈಲಿಗೆ ಹಾಕಲಾಗಿತ್ತು. ಹಾಗಾದರೆ ಅದೆಲ್ಲವನ್ನೂ ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿಯೇ ಮಾಡಿತು ಅಂದುಕೊಳ್ಳಬಹುದಾ? ಎಂದು ಪ್ರಶ್ನಿಸಿದರು.