VIDEO| ಸೇತುವೆಯಿಂದ ಬಸ್​ ಮೇಲೆ ಬಿದ್ದ ಕಬ್ಬಿಣ ತುಂಬಿದ ಟ್ರಕ್​: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

Truck 1
Published on

ಕಿಯೋಂಜಾರ್​: ರಸ್ತೆಯ ಮೇಲೆ ಜಾರಿದ ಟ್ರಕ್​ ಒಂದು​ ಸೇತುವೆ ಮೇಲಿಂದ ಉರುಳಿ ಕೆಳಗೆ ಚಲಿಸುತ್ತಿದ್ದ ಬಸ್​ ಮೇಲೆ ಬಿದ್ದರೂ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗದೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಒಡಿಶಾದ ಕಿಯೋಂಜರ್​ ಜಿಲ್ಲೆಯ ಸಲಪದದಲ್ಲಿ ಶನಿವಾರ ನಡೆದಿದೆ.

ಬಸ್​ನಲ್ಲಿ ಸುಮಾರು 50 ಮಂದಿ ಪ್ರಯಾಣಿಕರು ಇದ್ದರು. ಬಸ್​ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅವಘಡದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಘಟನೆಯ ಸಂಪೂರ್ಣ ಚಿತ್ರಣ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?: ಸೇತುವೆ ಅಡಿಯಿಂದ ಬರುವ ಬಸ್​ ಎಡಕ್ಕೆ ತಿರುವು ಪಡೆದುಕೊಂಡು ತುಸು ದೂರ ಸಾಗಿದ ತಕ್ಷಣವೇ ಸೇತುವೆ ಮೇಲಿಂದ ಕಬ್ಬಿಣ ತುಂಬಿದ ಟ್ರಕ್​ ಉರುಳಿ ಬಸ್​ ಮುಂಭಾಗದ ತುದಿಗೆ ಅಪ್ಪಳಿಸುತ್ತದೆ. ಅದನ್ನು ನೋಡಿದ ಜನರು ಏನಾಯಿತು ಎಂಬ ಗಾಬರಿಯಿಂದ ಓಡಿ ಹೋಗುತ್ತಾರೆ.

ಇನ್ನು ಚಾಲಕ ತನ್ನ ಸಮಯ ಪ್ರಜ್ಞೆಯಿಂದಾಗಿ ಟ್ರಕ್​ ಬೀಳುವುದನ್ನು ಗಮನಿಸಿ ಮೊದಲೇ ಬ್ರೇಕ್​ ಹಾಕಿ ಬಸ್​ ನಿಲ್ಲಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಭುವನೇಶ್ವರದ ಮೂಲದ ಬಸ್​ ಪ್ರಯಾಣಿಕರನ್ನು ಮಯೂರ್​ಬಂಜ್​ ಜಿಲ್ಲೆಯ ಕಾರಂಜಿಯಾದಿಂದ ಕರೆದೊಯ್ಯುತ್ತಿತ್ತು.

ಟ್ರಕ್​​ ಬಸ್​ ಮೇಲೆ ಬಿದ್ದಿದ್ದರಿಂದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಬಸ್​ ನಿರ್ವಾಹಕ, ಟ್ರಕ್​ ಚಾಲಕ ಮತ್ತು ಕೆಲವೇ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net