ಗಟ್ಟಿ ಜೀವದ ಬೆಕ್ಕು...! ವಾಷಿಂಗ್​ ಮಷಿನ್​ನಲ್ಲಿ, ಬಿಸಿ ನೀರಿನಲ್ಲಿ ಬಟ್ಟೆಗಳೊಂದಿಗೆ ಗಿರಗಿಟ್ಲೆ ಹೊಡೆದು ಬದುಕಿತು...

Cat
Published on

ಇಲ್ಲೊಂದು ಬರ್ಮೀಸ್​ ಬೆಕ್ಕಿನ ಜೀವ ಅದೆಷ್ಟು ಗಟ್ಟಿ ಅಂತೀರಿ...! ವಾಷಿಂಗ್​ ಮಷಿನ್​​ನಲ್ಲಿ ಬರೋಬ್ಬರಿ 12 ನಿಮಿಷ​ ಗಿರಗಿಟ್ಲೆ ಹೊಡೆದರೂ, ಇನ್ನೇನು ಬೆಕ್ಕು ಸತ್ತೇ ಹೋಯಿತು ಎಂದುಕೊಂಡಿದ್ದ ಮನೆಯವರಿಗೆ ಶಾಕ್​ ನೀಡುವಂತೆ ಬದುಕುಳಿದಿದೆ ಈ ಕ್ಯಾಟ್​.

ಇದು ಎರಡು ವರ್ಷದ ಬೆಕ್ಕಿನ ಮರಿ. ಆಸ್ಕರ್​ ಎಂದು ಅದರ ಹೆಸರು. ಮನೆಯೊಳಗೆ ಅಡ್ಡಾಡುತ್ತಿದ್ದ ಬೆಕ್ಕು, ಅಲ್ಲೇ ಇದ್ದ ಫ್ರಂಟ್​ ಲೋಡ್​ ವಾಶಿಂಗ್ ಮಷಿನ್​​ನಲ್ಲಿ ಬೆಚ್ಚಗೆ ಮಲಗಿದೆ. ಆದರೆ ಅದರ ಮಾಲೀಕಳಿಗೆ ಈ ವಿಷಯ ಗೊತ್ತಿರಲಿಲ್ಲ.

ಒಂದಷ್ಟು ಬಟ್ಟೆಗಳನ್ನು ಕ್ವಿಕ್​ ವಾಷ್​ ಮಾಡಬೇಕಿದ್ದ ಕಾರಣ, ಬಿಸಿ ನೀರು, ಡಿಟರ್ಜಂಟ್​ ಹಾಕಿ ಮಶಿನ್​​ನ ಸ್ವಿಚ್​ ಆನ್​ ಮಾಡಿದ್ದಾರೆ.

ಅಮಂದ್​ ಮೆರೆಡಿತ್​ ಎಂಬುವರೇ ಈ ಎಡವಟ್ಟು ಮಾಡಿದ ಮಹಿಳೆ. ವಾಷಿಂಗ್​ ಮಷಿನ್​ ಸೌಂಡ್​ ಜತೆ ಮಿಯಾಂವ್ ಎಂಬ ಶಬ್ದವೂ ಬರತೊಡಗಿದಾಗ ಆಕೆಗೆ ಏನೋ ಆಗಿದೆ ಎಂದು ಅನ್ನಿಸತೊಡಗಿತ್ತು. ಮೊದಲು ಅತ್ತಇತ್ತ ನೋಡಿದರು. ಬೆಕ್ಕಿನ ಕೂಗು ಎಲ್ಲಿಂದ ಬರುತ್ತಿದೆ ಎಂಬುದೇ ಅರ್ಥ ಆಗಿಲ್ಲ. ಮನೆಯೆಲ್ಲ ಹುಡುಕಿದರು. ಬೆಕ್ಕಿನ ಕೂಗು ಕೇಳುತ್ತಿತ್ತು ಹೊರತು ಎಲ್ಲೆಲ್ಲೂ ಕಾಣುತ್ತಿರಲಿಲ್ಲ. ಆದರೆ ಕೊನೆಗೆ ಬೆಕ್ಕು ವಾಷಿಂಗ್​ ಮಷಿನ್​ನಲ್ಲಿ ಸಿಲುಕಿಕೊಂಡಿದೆ ಎಂಬುದು ಅವರಿಗೆ ಗೊತ್ತಾಯಿತು. ಇದನ್ನೂ ಓದಿ: ‘ಮಾಸ್ಕ್​ ಧರಿಸದೆ ಹೊರಗೆ ಬಂದ್ರೆ ದಂಡ ತುಂಬಿ…ಸೀದಾ ಆಸ್ಪತ್ರೆಗೆ ನಡೀರಿ…’

ವಾಷಿಂಗ್​ ಮಷಿನ್​ ಒಳಗೆ ಅದರ ಗ್ಲಾಸಿನ ಮೂಲಕ ಬಗ್ಗಿ ನೋಡಿದಾಗ ಬೆಕ್ಕಿನ ಕಾಲು, ಮುಖ ಕಾಣಿಸುತ್ತಿತ್ತು. ಅದು ಪಿಳಿಪಿಳಿ ಕಣ್ಣು ಬಿಡುತ್ತ ನನ್ನನ್ನೇ ನೋಡುತ್ತಿತ್ತು ಎಂದು ಅಮಂದ್​ ತಿಳಿಸಿದ್ದಾರೆ.

ಅಷ್ಟರಲ್ಲಿ ವಾಶಿಂಗ್​ ಮಷಿನ್​ ಕೂಡ ಅನ್​ಲಾಕ್​ ಆಯಿತು. ಬೆಕ್ಕನ್ನು ಹೊರಗೆ ತೆಗೆದರೆ ಅದರ ಚರ್ಮ ಸುಟ್ಟು ಹೋಗಿತ್ತು. ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ಕೊನೆಗೂ ಬೆಕ್ಕು ಬದುಕುಳಿಯಿತು. ಎರಡು ವಾರಗಳ ನಂತರ ಸಹಜ ಸ್ಥಿತಿಗೆ ಬಂತು. ಆ ಘಟನೆ ನೆನಪಿಸಿಕೊಂಡರೇ ಭಯವಾಗುತ್ತದೆ ಎಂದು ಮಹಿಳೆ ಹೇಳಿದ್ದಾರೆ. ಹಾಗೇ ಈ ಘಟನೆ ನಡೆದಿದ್ದು ಆಸ್ಟ್ರೇಲಿಯಾದಲ್ಲಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net