

ತೈವಾನ್: ಚೀನಾದ ತೈವಾನ್ನಲ್ಲಿರುವ ಥೈಪೆದ ನಿವಾಸಿಯೋರ್ವ ತನ್ನ ಪುಟ್ಟ ಮಗಳ ಹಳೇ ಫೋಟೋಗಳು, ಅವಳು ಡ್ಯಾನ್ಸ್ ಮಾಡಿದ್ದ ವಿಡಿಯೋಗಳನ್ನೆಲ್ಲ ನೋಡುತ್ತಿದ್ದರು. ಆದರೆ ಅದರಲ್ಲಿ ಒಂದು ವಿಡಿಯೋ ನೋಡುತ್ತಿದ್ದಂತೆ ಅವರಿಗೆ ಭಯದಿಂದ ಬೆವರಲು ಶುರುವಾಯಿತು.
ಹ್ವಾಂಗ್ ಎನ್ನುವರಿಗೆ ಹೀಗೊಂದು ವಿಚಿತ್ರ, ಭಯಾನಕ ಅನುಭವ ಆಗಿದೆ. 2017ರ ಆಗಸ್ಟ್ 22ರಲ್ಲಿ ಯನ್ಲಿನ್ ಎಂಬಲ್ಲಿ ಇರುವ ತಮ್ಮ ಪತ್ನಿಯ ತವರುಮನೆಗೆ ಹೋಗಿದ್ದಾಗ ತನ್ನ ಪುಟ್ಟ ಮಗಳು, ಹಾಡು ಹೇಳುತ್ತ, ಡಾನ್ಸ್ ಮಾಡಿದ ವಿಡಿಯೋಗಳನ್ನು ಹ್ವಾಂಗ್ ಅವರೇ ಚಿತ್ರೀಕರಿಸಿದ್ದರು.
ಅದನ್ನು ಇತ್ತೀಚೆಗೆ ಮತ್ತೊಮ್ಮೆ ನೋಡುತ್ತಿದ್ದಾಗ ಒಂದು ಭಯ ಹುಟ್ಟಿಸುವ ಆಕೃತಿ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಪುಟ್ಟ ಬಾಲಕಿ ಬೆಡ್ ಮೇಲೆ ಕುಣಿದು, ಕುಪ್ಪಳಿಸುತ್ತಿದ್ದರೆ, ಹಿಂದೆ ಓರ್ವ ಮಹಿಳೆಯ ಆಕೃತಿ ಕಂಡಿತ್ತು. ಆ ಮಹಿಳೆಗೆ ಉದ್ದ ಕೂದಲಿತ್ತು. ಆದರೆ ಮುಖವೇ ಇರಲಿಲ್ಲ. ಇದು ವಿಡಿಯೋ ಮಾಡುವಾಗ ಗಮನಕ್ಕೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಅದನ್ನು ಹತ್ತಿರದಿಂದ ನೋಡಿದಾಗ ಆಕೃತಿ ಕಾಣಿಸಿಕೊಂಡಿತ್ತು. ಅದನ್ನು ನೋಡುತ್ತಿದ್ದಂತೆ ಹಾಂಗ್ ಭಯದಿಂದ ಬೆವರಿದ್ದರು.
ಆ ವಿಡಿಯೋವನ್ನು ಕುಟುಂಬದವರಿಗೂ ತೋರಿಸಿದೆ. ಅದೊಂದು ದೆವ್ವದಂತೆ ಭಾಸವಾಯಿತು. ಮನೆಯವರೆಲ್ಲರೂ ಭಯಪಟ್ಟರು ಎಂದು ಹಾಂಗ್ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ವಿಡಿಯೋ ಚಿತ್ರೀಕರಿಸಿದ ದಿನದಂದೇ ತನ್ನ ಮಾವನ ಮನೆಯ ಪಕ್ಕದಲ್ಲಿ ಒಂದು ಹುಡುಗಿ ಸತ್ತಿದ್ದಳು. ಆಕೆಯ ಅಂತ್ಯಕ್ರಿಯೆಯನ್ನು ಮನೆಯ ಹಿಂಭಾಗದಲ್ಲೇ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ.
ಆದರೆ ನೆಟ್ಟಿಗರು ಇದೊಂದು ಪಕ್ಕಾ ಫೇಕ್ ವಿಡಿಯೋ ಎಂದು ಹೇಳಿದ್ದಾರೆ. ಹ್ವಾಂಗ್ ಅವರು ಭಯ ಹುಟ್ಟಿಸಲೆಂದೇ ಹೀಗೆ ಮಾಡಿದ್ದಾರೆ. ಭೂತವೂ ಇಲ್ಲ, ಏನೂ ಇಲ್ಲ ಎಂದಿದ್ದಾರೆ.
ಆದರೆ ಹ್ವಾಂಗ್ ಮಾತ್ರ ಇದು ಸುಳ್ಳಲ್ಲ. ನಾನು ವಿಡಿಯೋ ಮಾಡುವಾಗ ಆ ಕೋಣೆಯಲ್ಲಿ ನಾನು ಮತ್ತು ಮಗಳು ಇಬ್ಬರೇ ಇದ್ದೆವು. ಉಳಿದವರೆಲ್ಲರೂ ಕೆಳಗೆ ಇದ್ದರು ಎಂದು ಹೇಳಿದ್ದಾರೆ. ನಾನು ನನಗಾದ ಸತ್ಯವಾದ ಅನುಭವವನ್ನೇ ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.(ಏಜೆನ್ಸೀಸ್)