ಶೀಘ್ರದಲ್ಲೇ ಜಾತಿ ಗಣತಿ ವರದಿ ಸ್ವೀಕಾರ: ಸಿಎಂ ಸಿದ್ದರಾಮಯ್ಯ ಪ್ರಕಟ; ಮೆಡಿಕಲ್ ಸೀಟು ಉಚಿತ ಅಸಾಧ್ಯ

Siddaramaiah
Published on

ಬೆಂಗಳೂರು: ಜಾತಿಗಣತಿ ವರದಿ ಸ್ವೀಕಾರಕ್ಕೆ ನಾವು ಬದ್ಧರಾಗಿದ್ದೇವೆ. ವರದಿಯು ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಸಲ್ಲಿಕೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿ, ನನ್ನ ಅವಧಿಯಲ್ಲಿ ನಡೆದ ಜಾತಿ ಸಮೀಕ್ಷೆ ಸಂದರ್ಭದಲ್ಲಿ ಕಾಂತರಾಜು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ಅವರು ವರದಿ ಸಲ್ಲಿಸಿದಾಗ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಂತರ ಬಂದ ಬಿ.ಎಸ್. ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿ ಪಡೆಯಲಿಲ್ಲ. ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಜಾತಿ ಗಣತಿ ವರದಿ ಕೊಡುತ್ತಾರೆ, ನಾವು ಸ್ವೀಕರಿಸುತ್ತೇವೆ ಎಂದರು.

ಎಲ್ಲರೂ ಶಿಕ್ಷಣ ಪಡೆಯಿರಿ: ಇದಕ್ಕೂ ಮುನ್ನ ಕಾಳಿದಾಸ ಹೆಲ್ತ್ ಆಂಡ್ ಎಜುಕೇಷನ್ ಟ್ರಸ್ಟ್ ಮತ್ತು ಅಹಿಲ್ಯಾ ಫೌಂಡೇಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ, ಇಡೀ ದೇಶದಲ್ಲಿ ಜಾತಿಗಣತಿ ಮೊದಲು ಮಾಡಿದ್ದು ನಮ್ಮ ಸರ್ಕಾರ. ನಿಖರವಾಗಿ ಪ್ರತಿ ಜಾತಿಗಳ ಆರ್ಥಿಕ, ಸಾಮಾಜಿಕ ಸ್ಥಿತಿ ತಿಳಿಯುವ ಉದ್ದೇಶದಿಂದ ಜಾತಿ ಜನಗಣತಿ ಮಾಡಿಸಿದ್ದೆ. ಹುಟ್ಟಿನಿಂದ ಯಾರೂ ಮೇಧಾವಿಗಳಲ್ಲ. ಅವಕಾಶ ಸಿಕ್ಕರೆ ಎಲ್ಲರೂ ಮೇಧಾವಿಗಳಾಗುತ್ತಾರೆ. ಪ್ರತಿಭೆ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಆದ್ದರಿಂದ ಸ್ವಾಭಿಮಾನಿಗಳಾಗಿ, ಉತ್ತಮ ಪ್ರಜೆಗಳಾಗಿ ಬಾಳಲು ಶಿಕ್ಷಣ ಅತ್ಯಂತ ಅಗತ್ಯ. ಎಲ್ಲರೂ ಶಿಕ್ಷಣ ಪಡೆಯಿರಿ ಎಂದು ಕರೆ ನೀಡಿದರು.

ಉಚಿತ ಸೀಟು ಸಾಧ್ಯವಿಲ್ಲ: ಸಮುದಾಯದಿಂದ ಮೆಡಿಕಲ್ ಕಾಲೇಜು ಮಾಡಬೇಕು ಎನ್ನುವುದು ಅವೈಜ್ಞಾನಿಕ. ಮೆಡಿಕಲ್ ಕಾಲೇಜು ನಡೆಸುವುದು ದುಬಾರಿ ಆದ್ದರಿಂದ ಬಡವರು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಸೀಟು ನೀಡಿ ನೆರವಾಗಲು ಸಾಧ್ಯವಿಲ್ಲ. ಆದ್ದರಿಂದ ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು, ಹಾಸ್ಟೆಲ್​ಗಳನ್ನು ಮತ್ತು ಐಟಿಐಗಳನ್ನು ಸಮಾಜದಿಂದ ಆರಂಭಿಸಿದರೆ ಬಡವರು ಮತ್ತು ಗ್ರಾಮೀಣ ಮಕ್ಕಳಿಗೆ ನೆರವಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಹಿಂದೆ ಗ್ರಾಮೀಣ ಭಾಗಗಳಲ್ಲಿ ವೈದ್ಯ ಹುದ್ದೆಗಳು ಹೆಚ್ಚಿದ್ದು ವೈದ್ಯರ ಸಂಖ್ಯೆ ಕಡಿಮೆ ಇತ್ತು. ಈಗ ಪರಿಸ್ಥಿತಿ ಬದಲಾಗಿ ಖಾಲಿ ಹುದ್ದೆಗಳಿಗಿಂತ ವೈದ್ಯರ ಸಂಖ್ಯೆ ದುಪ್ಪಟ್ಟಾಗಿದೆ. ಆದ್ದರಿಂದ ಖಾಲಿ ಇರುವ ಗ್ರಾಮೀಣ ವೈದ್ಯ ಹುದ್ದೆಗಳನ್ನಷ್ಟೇ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿ ನಿಯಮಾವಳಿಗೆ ತಿದ್ದುಪಡಿ ತರುವಂತಾಯಿತು ಎಂದು ಸ್ಪಷ್ಟಪಡಿಸಿದರು. ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ, ಸಚಿವ ಬೈರತಿ ಸುರೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಇತರರು ಇದ್ದರು.

ಬ್ರಿಟಿಷರು ಬರುವ ಮೊದಲು ಶಿಕ್ಷಣ ನಿಷೇಧ: ಬ್ರಿಟೀಷರು ಬರುವ ಮೊದಲು ಶೂದ್ರ ಸಮುದಾಯಗಳಿಗೆ ಶಿಕ್ಷಣ, ವಿದ್ಯೆ ನಿಷೇಧಿಸಲಾಗಿತ್ತು. ಮುಂದುವರಿದ ಜಾತಿಗಳ ಹೆಣ್ಣುಮಕ್ಕಳಿಗೂ ಮೊದಲು ವಿದ್ಯೆ ಕೊಡುವಂತಿರಲಿಲ್ಲ. ಅಂಬೇಡ್ಕರ್ ಶೂದ್ರ ಸಮುದಾಯ ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕು ನೀಡಿದರು. ಈ ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net