ಕಂಗನಾ ನಂತರ ಸೋನು ಸೂದ್​ ವಿರುದ್ಧ ಮೊಕದ್ದಮೆ ಹೇರಿದ ಬೃಹನ್ಮುಂಬೈ ಪಾಲಿಕೆ

sonu
Published on

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ಕಚೇರಿಯ ಕಟ್ಟಡವನ್ನು ಬೃಹನ್ಮುಂಬೈ ಪಾಲಿಕೆಯವರು (ಬಿಎಂಪಿ) ಧ್ವಂಸ ಮಾಡಲು ಯತ್ನಿಸಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಕಂಗನಾ ನಂತರ ಇದೀಗ ಮತ್ತೊಬ್ಬ ಬಾಲಿವುಡ್​ ನಟನ ವಿರುದ್ಧ ಬಿಎಂಪಿ ಮೊಕದ್ದಮೆ ದಾಖಲಿಸಿದೆ. ಲಾಕ್​ಡೌನ್​ ಸಮಯದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿ ರಿಯಲ್​ ಹೀರೋ ಎನಿಸಿಕೊಂಡ ನಟ ಸೋನು ಸೂದ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಸೋನು ಸೂದ್​ ಅವರು ವಸತಿ ಕಟ್ಟಡವನ್ನು ಅಕ್ರಮವಾಗಿ ಹೋಟೆಲ್​ ಆಗಿ ಪರಿವರ್ತಿಸುತ್ತಿದ್ದಾರೆ ಎನ್ನುವ ಆರೋಪವನ್ನು ಬಿಎಂಪಿ ಮಾಡಿದೆ. ಆದರೆ ಈ ಆರೋಪವನ್ನು ಸೋನು ಸೂದ್​ ಅವರು ತಳ್ಳಿ ಹಾಕಿದ್ದಾರೆ. ಮುಂಬೈನ ಜುಹುನಲ್ಲಿರುವ ಆರು ಮಹಡಿಯ ಶಕ್ತಿ ಸಾಗರ್​ ನಿವಾಸವನ್ನು ಹೋಟೆಲ್​ ಆಗಿ ಪರವರ್ತಿಸಲಾಗಿದೆ ಎನ್ನುವುದು ಬಿಎಂಪಿ ವಾದ.

ಕಟ್ಟಡದ ಪರಿವರ್ತನೆಗೆ ತಾವು ಅಗತ್ಯ ಅನುಮತಿ ಪಡೆದಿರುವುದಾಗಿ ಸೋನು ಸೂದ್​ ಹೇಳಿದ್ದಾರೆ. ಮಹಾರಾಷ್ಟ್ರದ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರದ (ಎಂಸಿಜಡ್​ಎಂಎ) ಅನುಮತಿ ಮಾತ್ರ ಬಾಕಿಯಿದೆ ಎಂದು ಅವರು ತಿಳಿಸಿದ್ದಾರೆ. ಮಹಾರಾಷ್ಟ್ರ ಪ್ರದೇಶ ಮತ್ತು ಯೋಜನಾ ಕಾನೂನಿನ ಅನ್ವಯ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಬಿಎಂಪಿ ಸೂಚಿಸಿದೆ. ಬಿಎಂಪಿ ನೋಟಿಸ್​ಗೆ​ ತಡೆ ತರಲು ನಟ ಕಳೆದ ವರ್ಷ ಅಕ್ಟೋಬರ್​ನಲ್ಲಿ ಸಿಟಿ ಸಿವಿಲ್​ ಕೋರ್ಟ್​ ಮೊರೆ ಹೋಗಿದ್ದರು. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಬಿಎಂಪಿಯಿಂದ ಎಲ್ಲ ಅನುಮತಿ ಪಡೆಯಲಾಗಿದೆ. ಆದರೆ ಕರೊನಾ ಕಾರಣದಿಂದಾಗಿ ಕರಾವಳಿ ಪ್ರಾಧಿಕಾರದ ಅನುಮೋದನೆ ಮಾತ್ರ ಸಿಕ್ಕಿಲ್ಲ ಎಂದು ಅವರು ಸ್ಪಷ್ಪಪಡಿಸಿದ್ದಾರೆ. ನೋಟಿಸ್​ ವಿರುದ್ಧ ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net