

ಹೈದರಾಬಾದ್: ಪ್ರಕರಣವೊಂದರ ಇತ್ಯರ್ಥಕ್ಕಾಗಿ ಕಂಪನಿ ಯೊಂದರಿಂದ ಐದು ಕೋಟಿ ರೂಪಾಯಿ ಲಂಚ ಕೇಳಿದ ಆರೋಪದ ಮೇಲೆ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ತೆರಿಗೆಗಳ್ಳತನ ನಿಗ್ರಹ ದಳದ ಇಬ್ಬರು ಹಿಂದಿನ ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮೊಕದ್ದಮೆ ದಾಖಲಿಸಿದೆ.
ಜಿಎಸ್ಟಿ ಇಲಾಖೆಯ ತೆರಿಗೆಗಳ್ಳತನ ನಿಗ್ರಹ ದಳದ ಮಾಜಿ ಡೆಪ್ಯುಟಿ ಕಮಿಷನರ್ ಸುಧಾರಾಣಿ ಚಿಲಾಕ ಮತ್ತು ಸೂಪರಿಂಟೆಂಡೆಂಟ್ ಶ್ರೀನಿವಾಸ ಗಾಂಧಿ ಬೊಲ್ಲಿನೇನಿ ಆರೋಪಿತ ಅಧಿಕಾರಿಗಳು. ಹೈದರಾಬಾದ್ನಲ್ಲಿ ನಿಯುಕ್ತರಾಗಿದ್ದ ಈ ಇಬ್ಬರು 2019 ಏಪ್ರಿಲ್ 15ರಂದು ಇನ್ಫಿನಿಟಿ ಮೆಟಲ್ ಪ್ರಾಡಕ್ಟ್ಸ್ ಎಂಬ ಕಂಪನಿಯಿಂದ 5 ಕೋಟಿ ರೂ.ಲಂಚ ಕೇಳಿದ್ದು 10 ಲಕ್ಷ ರೂ. ಪಡೆದಿದ್ದರು. ತೆರಿಗೆ ಕಟ್ಟದಿರುವ ವಿಚಾರದಲ್ಲಿ ಆ ಕಂಪನಿ ಮೊಕದ್ದಮೆ ಎದುರಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಪುರಾವೆಗಳನ್ನು ಕಲೆ ಹಾಕಿದ ಮೇಲೆ ಅವರನ್ನು ಬಂಧಿಸಲಾಗಿತ್ತು.
ಬೊಲ್ಲಿನೇನಿ ಗಾಂಧಿ ಜಾರಿ ನಿರ್ದೇಶನಾಲಯದಲ್ಲಿ ಇದ್ದಾಗ ಹೈದರಾಬಾದ್ನ ಮುಸದ್ದಿಲಾಲ್ ಜ್ಯುವೆಲರ್ಸ್ ವಿರುದ್ಧದ 100 ಕೋಟಿ ನೋಟು ಅಮಾನ್ಯೀಕರಣ ವಂಚನೆ ಕೇಸ್ ಹಾಗೂ ಕರ್ನಾಟಕದ ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣ ಸಹಿತ ಹಲವು ಪ್ರಕರಣಗಳ ತನಿಖೆ ನಡೆಸಿದ್ದರು.