ಬಿಡಿಎ ಅಧಿಕಾರಿಗಳ ವಿರುದ್ಧ ಕೇಸ್

FIR-2
Published on

ಬೆಂಗಳೂರು: ಅತಿಕ್ರಮ ಪ್ರವೇಶ ಮಾಡಿ ನಿರ್ಮಿಸುತ್ತಿದ್ದ ಕಟ್ಟಡ ತೆರವು ಸಂಬಂಧ ಬಿಡಿಎ ಅಧಿಕಾರಿಗಳ ಮತ್ತು ಸ್ವತ್ತಿನ ಮಾಲೀಕರ ನಡುವೆ ಜಗಳ ನಡೆದು ರಾಮಮೂರ್ತಿನಗರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ಬಾಣಸವಾಡಿ ಒಎನ್‌ಆರ್‌ಬಿ ಲೇಔಟ್ ನಿವಾಸಿ ಪ್ರಭಾಕರ್ ರೆಡ್ಡಿ ನೀಡಿದ ದೂರಿನ ಮೇರೆಗೆ ಬಿಡಿಎ ಎಇಇ ವಾಸುದೇವ ಮೂರ್ತಿ, ಎಇ ಸವಿತಾ ಮತ್ತು ಇತರರ ವಿರುದ್ಧ ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿಯಾಗಿ ಬಿಡಿಎ ಎಇಇ ವಾಸುದೇವಮೂರ್ತಿ ನಿಡಿದ ದೂರಿನ ಮೇರೆಗೆ ಪ್ರಭಾಕರ್ ರೆಡ್ಡಿ ಮತ್ತು ಅಭಿಲಾಷ್, ಮುತ್ತುರಾಜ್ ಎಂಬುವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಭಾಕರ್ ರೆಡ್ಡಿ, 2 ಅಂತಸ್ತಿನ ಕಟ್ಟಡ ನಿರ್ಮಾಣ ಸಂಬಂಧ 2018ರಿಂದ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ನ.21ರಂದು ಬಿಡಿಎ ಅಧಿಕಾರಿಗಳು ಕೋರ್ಟ್ ಆದೇಶ ಉಲ್ಲಂಸಿ ಕಟ್ಟಡ ತೆರವು ಕಾರ್ಯಾಚರಣೆಗೆ ಬಂದಿದ್ದು, ಪ್ರಶ್ನಸಿದಕ್ಕೆ ನಿಂದಿಸಿ, ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ ಬಿಡಿಎ ಎಇಇ ವಾಸುದೇವಮೂರ್ತಿ, ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬಿಡಿಎ ಸ್ವತ್ತು ಒತ್ತುವರಿ ತೆರವು ಕಾರ್ಯಾಚರಣೆಗೆ ಹೋದಾಗ ಆರೋಪಿತರು ಅವಾಚ್ಯ ಶಬ್ದದಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net