

ಬೆಂಗಳೂರು: ಸರಕು ಸಾಗಣೆ ವಾಹನ ಪೌರಕಾರ್ಮಿಕನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಟಿ. ದಾಸರಹಳ್ಳಿ ರವೀಂದ್ರನಗರ ನಿವಾಸಿ ಗಂಗಾಧರ್ (49) ಮೃತ ಪೌರಕಾರ್ಮಿಕ. ಮಂಗಳವಾರ ಬೆಳಗ್ಗೆ 7 ಗಂಟೆಗೆ ಚೊಕ್ಕಸಂದ್ರ ಕೆರೆಯ ಎದುರಿನ ಕೆಐಡಿಬಿ ರಸ್ತೆಯನ್ನು ದಾಟುವಾಗ ಅಪಘಾತ ಸಂಭವಿಸಿದೆ. 20 ವರ್ಷದಿಂದ ಬಿಬಿಎಂಪಿ ಪೌರಕಾರ್ಮಿಕನಾಗಿ ಗಂಗಾಧರ್ ಕೆಲಸ ಮಾಡುತ್ತಿದ್ದರು.
ಚೊಕ್ಕಸಂದ್ರ ವಾರ್ಡಿನ ಮಸ್ಟರಿಂಗ್ ಕೇಂದ್ರದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚೊಕ್ಕಸಂದ್ರ ಕೆರೆ ಬಳಿಯ ರಸ್ತೆ ದಾಟುವಾಗ ದಾಸರಹಳ್ಳಿ ಜಂಕ್ಷನ್ ಕಡೆಯಿಂದ ವೇಗವಾಗಿ ಬಂದು ಸರಕು ಸಾಗಣೆ ವಾಹನ ಗಂಗಾಧರ್‌ಗೆ ಡಿಕ್ಕಿ ಹೊಡೆದಿದೆ.
ಗುದ್ದಿದ ರಭಸಕ್ಕೆ ರಸ್ತೆಗೆ ಬಿದ್ದ ಗಂಗಾಧರ್ ತಲೆ ಮೇಲೆ ವಾಹನ ಮುಂಭಾಗದ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸರಕು ಸಾಗಣೆ ವಾಹನದ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.