ಸರಕು ಹಡಗಿಗೆ ಬೆಂಕಿ; ಧಗಧಗನೆ ಹೊತ್ತಿ ಉರಿದ 'ಅಕ್ಕಿ ಮತ್ತು ಸಕ್ಕರೆ' ಮೂಟೆಗಳು | ship

ship
Published on

ಪೋರಬಂದರ್: ಲಂಗರು ಹಾಕಲಾಗಿದ್ದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಗುಜರಾತ್‌ನ ಪೋರಬಂದರ್‌ನ ಸುಭಾಷ್‌ನಗರದ ಜೆಟ್ಟಿಯಲ್ಲಿ ನಡೆದಿದೆ. ಹಡಗು ಸೊಮಾಲಿಯಾದ ಬೊಸಾಸೊಗೆ ತೆರಳುತ್ತಿದ್ದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.

ಹಡಗು ಜಾಮ್‌ನಗರ ಮೂಲದ ಖಾಸಗಿ ಕಂಪನಿಗೆ ಸೇರಿದ್ದಾಗಿದ್ದು, ಅದರಲ್ಲಿ ಅಕ್ಕಿ ಮತ್ತು ಸಕ್ಕರೆ ಮೂಟೆಗಳನ್ನು ಸಾಗಿಸಲಾಗುತ್ತಿತ್ತು. ಅಧಿಕ ಪ್ರಮಾಣದ ಅಕ್ಕಿಯ ಹೊರೆಯಿಂದಾಗಿ ಬೆಂಕಿಯ ಜ್ವಾಲೆ ತೀವ್ರಗೊಂಡಾಗ ಹಡಗನ್ನು ಸಮುದ್ರದ ಮಧ್ಯಕ್ಕೆ ಎಳೆದು ತರಲಾಯಿತು ಎನ್ನಲಾಗಿದೆ. ಇನ್ನೂ ಈ ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕೆಲಸ ಮುಂದುವರೆಸಿದ್ದಾರೆ.

ಕಳೆದ ಜೂನ್‌ನಲ್ಲಿ, ಓಮನ್ ಕರಾವಳಿಯ ಬಳಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿತ್ತು. ಹಡಗಿನಲ್ಲಿ ಭಾರತೀಯ ಮೂಲದ 14 ಸಿಬ್ಬಂದಿ ಇದ್ದರು ಎನ್ನಲಾಗಿತ್ತು. ಹಡಗಿಗೆ ಬೆಂಕಿ ಆವರಿಸುತ್ತಿದ್ದಂತೆ ಭಾರತೀಯ ನೌಕಾಪಡೆಯ ಸ್ಟೆಲ್ತ್ ಫ್ರಿಗೇಟ್ ಐಎನ್ಎಸ್ ತಬರ್ ತಕ್ಷಣ ರಕ್ಷಣೆಗೆ ಧಾವಿಸಿತ್ತು. ಭಾರತದ ಮೂಲದ 14 ಸಿಬ್ಬಂದಿಯನ್ನು ಹೊಂದಿದ್ದ ಹಡಗಿನ ಎಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಡಗಿನಲ್ಲಿ ಸಂಪೂರ್ಣ ವಿದ್ಯುತ್ ವ್ಯತ್ಯಯ ಉಂಟಾಗಿತ್ತು ಎಂದು ನೌಕಾಪಡೆ ಮಾಹಿತಿಯನ್ನು ನೀಡಿತ್ತು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net