

Car accident in Canada: ಟೆಸ್ಲಾ ಕಾರೊಂದು ಡಿವೈಡರ್ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಪರಿಣಾಮ ಇಬ್ಬರು ಒಡಹುಟ್ಟಿದವರು ಸೇರಿ ನಾಲ್ವರು ಭಾರತೀಯರು ಸುಟ್ಟು ಕರಕಲಾದ ಆಘಾತಕಾರಿ ಘಟನೆ ಕೆನಡಾದ ಟೊರೊಂಟೋ ನಗರದಲ್ಲಿ ಅಕ್ಟೋಬರ್ 24 ರಂದು ಮಧ್ಯರಾತ್ರಿ 12:15 ರ ಸುಮಾರಿಗೆ ಈ ಘಟನೆ ನಡೆದಿದೆ.
ಮೃತ ಒಡಹುಟ್ಟಿದವರನ್ನು ಕೇತಬಾ ಗೋಹಿಲ್ (30) ಮತ್ತು ನೀಲರಾಜ್ ಗೋಹಿಲ್ (26) ಎಂದು ಗುರುತಿಸಲಾಗಿದೆ. ಇವರು ಗುಜರಾತಿನ ಗೋಧ್ರಾ ಮೂಲದವರು. ಇವರೊಂದಿಗೆ ಪ್ರಯಾಣಿಸುತ್ತಿದ್ದ ದಿಗ್ವಿಜಯ್ ಪಟೇಲ್ ಮತ್ತು ಜೈ ಸಿಸೋಡಿಯಾ ಕೂಡ ಸಾವಿಗೀಡಾಗಿದ್ದಾರೆ.
ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ನಂತರ ಕಾಂಕ್ರೀಟ್ ಪಿಲ್ಲರ್ಗೂ ಗುದ್ದಿದೆ. ಇದಾದ ಬಳಿಕ ಬ್ಯಾಟರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರು ಧಗಧಗನೇ ಹೊತ್ತಿ ಉರಿದಿದೆ. ನಾಲ್ವರಲ್ಲಿ ಒಬ್ಬರು ಕಾರಿನೊಳಗಿಂದ ಕಿರುಚುವುದನ್ನು ಅದೇ ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಬೈಕ್ ಸವಾರರೊಬ್ಬರು ಗಮನಿಸಿದ್ದಾರೆ. ತಕ್ಷಣ 20 ವರ್ಷದ ಮಹಿಳೆಯನ್ನು ಕಾರಿನಿಂದ ಹೊರಗೆಳೆಯಲಾಯಿತು. ಗಂಭೀರವಾದ ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅವರೂ ಮೃತಪಟ್ಟರು ಎಂದು ಬೈಕ್ ಸವಾರ ತಿಳಿಸಿದ್ದಾರೆ.
ಅಪಘಾತದಲ್ಲಿ ಸಿಲುಕಿದವರಿಗೆ ಸಹಾಯ ಮಾಡಲು ಹಲವಾರು ಮಂದಿ ತಮ್ಮ ಕಾರುಗಳು ನಿಲ್ಲಿಸಿ, ಅಪಘಾತಕ್ಕೀಡಾದ ಕಾರಿನ ಗಾಜುಗಳನ್ನು ಒಡೆಯಲು ಪ್ರಯತ್ನಿಸಿದೆವು. ಆದರೂ ಪ್ರಯೋಜನವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಟೊರೊಂಟೋ ಫೈರ್ ಡೆಪ್ಯುಟಿ ಚೀಫ್ ಜಿಮ್ ಜೆಸ್ಸಾಪ್ ಮಾತನಾಡಿ, ಎಲೆಕ್ರಿಕಲ್ ವಾಹನದ ಬೆಂಕಿಯನ್ನು ನಂದಿಸಲು ಸಾಕಷ್ಟು ಪ್ರಮಾಣದ ನೀರಿನ ಅಗತ್ಯವಿತ್ತು. ಕೊನೆಗೂ ಬೆಂಕಿಯನ್ನು ನಂದಿಸಿ, ಕಾರಿನ ಬ್ಯಾಟರಿ ಸೆಲ್ ಅನ್ನು ಡಂಪ್ಸ್ಟರ್ನಲ್ಲಿ ವಿಲೇವಾರಿ ಮಾಡಲಾಯಿತು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)