ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಿ

10ald-1
ಆಲ್ದೂರು ಭಾಗದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ವಲಯ ಅರಣ್ಯಾಧಿಕಾರಿ ಹರೀಶ್ ಅವರಿಗೆ ಮನವಿ ಸಲ್ಲಿಸಿದರು. ಸುರೇಶ್, ಲಕ್ಷ್ಮಣ್, ದೀಪಕ್ ದೊಡ್ಡಯ್ಯ, ನರೇಂದ್ರ ಇತರರಿದ್ದರು.
Published on

ಆಲ್ದೂರು: ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟಗಳಿಗೆ ಕಾಡಾನೆಗಳು ನುಗ್ಗಿ ಕಾಫಿ, ಅಡಕೆ, ಬಾಳೆ ಗಿಡ, ತೆಂಗಿನ ಮರಗಳನ್ನು ನಾಶಮಾಡುತ್ತಿವೆ. ಹಾಗಾಗಿ ಆನೆಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಆಲ್ದೂರು, ಆವತಿ ಹೋಬಳಿ ಕಾಫಿ ಬೆಳೆಗಾರ ಸಂಘದ ಪದಾಧಿಕಾರಿಗಳು ಅರಣ್ಯ ಇಲಾಖೆ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಬೇರೆ ಭಾಗದಿಂದ ಬಂದಿರುವ ಕಾಡಾನೆಗಳು ಅರೆನೂರು, ಕಂಚಿನಕಲ್ ದುರ್ಗ ಮತ್ತಿತರ ಗ್ರಾಮಗಳಲ್ಲಿ ಕಾಫಿ ತೋಟಗಳನ್ನು ನಾಶಮಾಡುತ್ತಿವೆ. ಒಂದು ಭಾಗದಿಂದ ಓಡಿಸಿದರೆ ಪಕ್ಕದ ಗ್ರಾಮಗಳಿಗೆ ಬರುತ್ತಿವೆ. ಇದರಿಂದ ಜನರಲ್ಲಿ ಆತಂಕ ಹೆಚ್ಚುತ್ತಿದೆ. ಇವುಗಳನ್ನು ಹಿಡಿದು ಸ್ಥಳಾಂತರಿಸಿ ಎಂದು ಆಲ್ದೂರು ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಸುರೇಶ್ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ಬಾಳೆಗೆ ಈಗ ಭಾರಿ ಬೇಡಿಕೆ ಇದೆ. ಆದರೆ ಕಾಡಾನೆ ಉಪಟಳದಿಂದ ತಪ್ಪಿಸಿಕೊಳ್ಳಲು ಬೆಳೆಗಾರರು ಬಾಳೆ ಗಿಡಗಳನ್ನು ಕಡಿದು ಹಾಕುತ್ತಿದ್ದಾರೆ. ಕಾಫಿ ತೋಟಕ್ಕೆ ಭೇಟಿ ನೀಡಿದಾಗ ಬೆಳೆಗಾರರು ಈ ಸಮಸ್ಯೆಯನ್ನು ಹೇಳಿಕೊಂಡರು. ಕಳೆದೆರಡು ವರ್ಷಗಳಿಂದ ಕಂಚಿನಕಲ್ ದುರ್ಗ, ಹಾಂದಿ ಭಾಗದಲ್ಲಿ ಕಾಡಾನೆ ದಾಳಿಗೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಆಲ್ದೂರು ಗ್ರಾಪಂ ಸದಸ್ಯ ಲಕ್ಷ್ಮಣ್ ಮಾತನಾಡಿ, ಡ್ರೋನ್ ಕ್ಯಾಮರಾ ಬಳಸಿ ಕಾಡಾನೆಗಳನ್ನು ಪತ್ತೆಹಚ್ಚಿ ಸ್ಥಳಾಂತರಿಸಬೇಕು. ಅರಣ್ಯ ಇಲಾಖೆ ಕಾಡಾನೆಗಳ ಇರುವಿಕೆಯ ಸೂಕ್ತ ಮಾಹಿತಿಯನ್ನು ಜನರಿಗೆ ನೀಡಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥ ಸುಪ್ರೀತ್ ಮಾತನಾಡಿ, ಆನೆ ಕಾರ್ಯಪಡೆ ಸಿಬ್ಬಂದಿಯನ್ನು ಕಾಯಂಗೊಳಿಸಿ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಬೆಳೆಗಾರರು ಕಾಫಿ ತೋಟಗಳಲ್ಲಿ ಹೆಚ್ಚು ಪಟಾಕಿ ಸಿಡಿಸಬಾರದು. ಎಲ್ಲ ಭಾಗದಲ್ಲಿ ಪಟಾಕಿ ಸಿಡಿಸುವುದರಿಂದ ಆನೆಗಳು ಆತಂಕದಲ್ಲಿ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ದೊಡ್ಡ ಆನೆಗಳ ಜತೆಗೆ ಎರಡು ಮರಿಗಳು ಇರುವುದರಿಂದ ಗಾಬರಿಗೊಳಿಸಬೇಡಿ ಎಂದು ವಲಯ ಅರಣ್ಯಾಧಿಕಾರಿ ಹರೀಶ್ ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನರೇಂದ್ರ, ಕಾರ್ಯದರ್ಶಿ ಸಂಪತ್, ಆಲ್ದೂರು ಮಂಡಲ ಅಧ್ಯಕ್ಷ ಮುಗುಳುವಳ್ಳಿ ದಿನೇಶ್, ಪ್ರಧಾನ ಕಾರ್ಯದರ್ಶಿ ಮನು ರಾಮೇಗೌಡ, ಯುವ ಮೊರ್ಚಾ ಅಧ್ಯಕ್ಷ ಸಿಂಧುಕುಮಾರ್, ಹೋಬಳಿ ಅಧ್ಯಕ್ಷ ಸುದರ್ಶನ್, ಮಹೇಶ್ ಕೆರೆಮಕ್ಕಿ, ಭವ್ಯಾ, ಮೈಲಿಮನೆ ಕಿಶನ್, ಬಿ.ಎಸ್.ರಾಜೀವ್, ಹರೀಶ್ ಕೃಷ್ಣಮೂರ್ತಿ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net