ಕರೊನಾ ಸಂಕಷ್ಟದಲ್ಲಿ ರಾಜಧಾನಿ ನವದೆಹಲಿ: 7600 ದಾಟಿದ ಸೋಂಕಿತರು

delhi
Published on

ರಾಘವ ಶರ್ಮ ನಿಡ್ಲೆ ನವದೆಹಲಿ

ದೇಶದ ರಾಜಧಾನಿ ದೆಹಲಿಯಲ್ಲಿ ಕರೊನಾ ವೈರಸ್ ಸೋಂಕಿತ ಕೇಸುಗಳು 7600 ದಾಟಿದೆ. ಎಲ್ಲಾ ಜಿಲ್ಲೆಗಳೂ ಕೆಂಪು ವಲಯದ ವ್ಯಾಪ್ತಿಯಲ್ಲಿವೆ. ತೀರಾ ಆತಂಕಕಾರಿ ಎನಿಸುವಷ್ಟರ ಮಟ್ಟಿಗೆ ನಿತ್ಯವೂ ಇಲ್ಲಿ ಸೋಂಕಿತರು ಹೆಚ್ಚುತ್ತಿದ್ದಾರೆ.

ಏತನ್ಮಧ್ಯೆ, ಲಾಕ್ ಡೌನ್ ಸಡಿಲಗೊಳಿಸಿರುವ ಸರ್ಕಾರ ಬೆಳಗ್ಗೆ 7ರಿಂದ ಸಂಜೆ 7ರ ತನಕ ಅಂಗಡಿಗಳ ತೆರೆಯುವಿಕೆ ಸೇರಿದಂತೆ ಸಾರ್ವಜನಿಕ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಆದರೆ, ಲಾಕ್ ಡೌನ್ ಸಡಿಲಗೊಳಿಸುವಿಕೆಗೆ ದೆಹಲಿ ನಿಜಕ್ಕೂ ಸಜ್ಜಾಗಿದೆಯೇ? ಸರ್ಕಾರ ಆರ್ಥಿಕ ದೃಷ್ಟಿಯಿಂದ ಯೋಚಿಸಬೇಕಿದ್ದರೂ, ಅದಕ್ಕಾಗಿ ಜನರ ಆರೋಗ್ಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕೇ ಎಂಬ ಪ್ರಶ್ನೆಗಳೆದ್ದಿವೆ. ಹೀಗಾಗಿ, ದೆಹಲಿಯಲ್ಲಿ ಮೇ.31ರ ತನಕ ಕಡ್ಡಾಯ ಲಾಕ್ ಡೌನ್ ಮುಂದುವರಿಸಬೇಕು ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.

ಸರ್ಕಾರ ಲಾಕ್​ಡೌನ್​ನಲ್ಲಿ ವಿನಾಯಿತಿ ನೀಡಿರುವುದರಿಂದ ಖಂಡಿತವಾಗಿಯೂ ವೈರಾಣು ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ. ಅಂಗಡಿ-ಮುಂಗಟ್ಟುಗಳಲ್ಲಿನ ಕೆಲವು ದೃಶ್ಯಗಳನ್ನು ನೋಡಿದರೆ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ವೈರಾಣು ನಿಯಂತ್ರಣಕ್ಕೆ ಬಂದಿಲ್ಲ ಎನ್ನುವುದು ಅಂಕಿ ಅಂಶಗಳೇ ಹೇಳುತ್ತವೆ. ಹೀಗೆ ಮುಂದುವರಿದಲ್ಲಿ ಮುಂದಿನ ಮೂರ್ನಾಲ್ಕು ವಾರಗಳಲ್ಲಿ ದೆಹಲಿ ಸೇರಿ ವಿವಿಧ ನಗರಗಳಲ್ಲಿ ಕರೊನಾ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಕನಿಷ್ಠ ರೆಡ್ ಝೆೊನ್ ಗಳಲ್ಲಾದರೂ ಲಾಕ್ ಡೌನ್ ನಿಯಮಗಳನ್ನು ಕಡ್ಡಾಯವಾಗಿ ಹೇರಬೇಕುಞಞ ಎಂದು ದೆಹಲಿಯ ವೈದ್ಯ ಡಾ. ಸಚಿತ್ ಶೆಟ್ಟಿ ಹೇಳುತ್ತಾರೆ.

ಸೋಂಕಿತರಾಗಿದ್ದರೂ ಕರೊನಾ ಲಕ್ಷಣಗಳಿಲ್ಲದ ವ್ಯಕ್ತಿಗಳು ಸಾರ್ವಜನಿಕರ ಮಧ್ಯೆ ಓಡಾಡಿದಲ್ಲಿ ಅವರಿಂದ ಸೋಂಕಿತರಲ್ಲದವರಿಗೆ ವೈರಾಣು ಹರಡುವ ಎಲ್ಲಾ ಸಾಧ್ಯತೆಗಳಿರುತ್ತವೆ. ಸರ್ಕಾರವೇ ಹೇಳುವಂತೆ ದೆಹಲಿಯ ಶೇ.75ರಷ್ಟು ಕೇಸುಗಳು ಚಠಢಞಟಠಿಟಞಚಠಿಜ್ಚಿ (ಸೋಂಕಿನ ಲಕ್ಷಣವಿಲ್ಲದ) ಮತ್ತು ಸಣ್ಣಪುಟ್ಟ ಲಕ್ಷಣಗಳಿದ್ದವಾಗಿವೆ. ಹೀಗಾಗಿ, ಜನರು ದೈಹಿಕ ಅಂತರ ಕಾಯ್ದುಕೊಂಡು ವೈರಾಣು ಹರಡದಂತೆ ಎಚ್ಚರವಹಿಸಬೇಕು ಎಂದು ಪದೇ ಪದೇ ಹೇಳಲಾಗುತ್ತಿದೆ. ಕರೊನಾ ಪರೀಕ್ಷೆ ಮಾಡಿಕೊಳ್ಳದ ಸೋಂಕಿರುವ ಚಠಢಞಟಠಿಟಞಚಠಿಜ್ಚಿ ವ್ಯಕ್ತಿಗಳನ್ನು ತಡೆಯಬೇಕೆಂದರೆ ಲಾಕ್ ಡೌನ್ ಅನಿವಾರ್ಯ. ಆದರೆ ಲಾಕ್ ಡೌನ್ ಸಡಿಲಗೊಳಿಸಿರುವುದರಿಂದ ಸದ್ಯದ ಮಟ್ಟಿಗೆ ಕರೊನಾ ಕೇಸುಗಳಲ್ಲಿ ಇಳಿಮುಖ ಸಾಧ್ಯತೆ ಕಡಿಮೆ ಎಂದೇ ಅಂದಾಜಿಸಲಾಗಿದೆ. ಈವರೆಗೆ ದಿಲ್ಲಿಯಲ್ಲಿ 7639 ಕೇಸುಗಳು ಪತ್ತೆಯಾಗಿದ್ದರೆ, 2512 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಸತ್ತವರ ಸಂಖ್ಯೆ 86. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ಕಡಿಮೆ ಎನ್ನುವುದೇ ಸಮಾಧಾನಕರ ವಿಷಯ. ಸದ್ಯ 5041 ಕೇಸುಗಳು ಸಕ್ರಿಯವಾಗಿವೆ. ಕರೊನಾ ಸಾವಿನ ಸಂಖ್ಯೆಗೆ ಸಂಬಂಧಿಸಿದಂತೆ ಶುಕ್ರವಾರದಂದು ದೆಹಲಿ ಸರ್ಕಾರ ನೀಡಿದ ಮಾಹಿತಿ ಹಾಗೂ ಹಿರಿಯ ವೈದ್ಯರು ಹಂಚಿಕೊಂಡ ಅಂಕಿ ಅಂಶಗಳಲ್ಲಿನ ವ್ಯತ್ಯಾಸ ವ್ಯಾಪಕ ಟೀಕೆಗೆ ಗುರಿಯಾಗಿದೆ. 68 ಮಂದಿ ಕರೊನಾದಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳಿದರೆ, 4 ಪ್ರತಿಷ್ಟಿತ ಆಸ್ಪತ್ರೆಗಳ ಪ್ರಕಾರ 92 ಮಂದಿ ಮೃತಪಟ್ಟಿದ್ದಾರೆ. ಸರ್ಕಾರ ಉದ್ದೇಶಪೂರ್ವಕವಾಗಿ ಸಾವಿನ ಸಂಖ್ಯೆ ಮುಚ್ಚಿಟ್ಟಿದೆ ಎಂದು ಆಪಾದಿಸಲಾಗಿದ್ದರೂ, ರಾಜ್ಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಇದನ್ನು ತಳ್ಳಿಹಾಕಿದ್ದಾರೆ.

ಕರೊನಾ ಜತೆ ಹೊಂದಿಕೊಂಡು ಬದುಕಿ

ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ನಾವು ಕರೊನಾ ವೈರಾಣುವಿನೊಂದಿಗೆ ಹೊಂದಿ ಕೊಂಡು ಬಾಳಲು ಯತ್ನಿಸಬೇಕಿದೆ ಎಂದಿದ್ದರು. ಈಗ ದಿಲ್ಲಿ ಸಿಎಂ ಕೇಜ್ರಿವಾಲ್ ಕೂಡ ಅದೇ ದನಿಯಲ್ಲಿ ಮಾತನಾಡಿದ್ದು, ದಿಲ್ಲಿಯ ಸೋಂಕಿತರ ಪೂರ್ಣ ರಕ್ಷಣೆಗೆ ಸರ್ಕಾರ ಕೆಲಸ ಮಾಡುತ್ತಿದೆ. ಹಾಗಿದ್ದರೂ, ಜನರು ಕೋವಿಡ್-19 ಜತೆ ಹೊಂದಿಕೊಂಡು ಬದುಕಬೇಕಿದೆ ಎಂದಿದ್ದಾರೆ. ಕರೊನಾ ಲಕ್ಷಣಗಳು ಕಾಣಿಸಿಕೊಳ್ಳದ ವ್ಯಕ್ತಿಗಳನ್ನು ಮನೆಯಲ್ಲೇ ಇದ್ದುಕೊಂಡು ಎಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸರ್ಕಾರ ವಿನಂತಿಸಿಕೊಂಡಿದೆ ಮತ್ತು ಮನೆಯಲ್ಲಿ ಐಸೊಲೇಷನ್ ಸಾಧ್ಯವಾಗದ ಪರಿಸ್ಥಿತಿಯಿದ್ದರೆ ಅಂಥಾ ವ್ಯಕ್ತಿಗಳನ್ನು ಕೋವಿಡ್ ಕೇರ್ ಘಟಕಗಳಲ್ಲಿ ದಾಖಲಿಸಲಾಗುತ್ತಿದೆ. ರಾಜಧಾನಿಯಲ್ಲಿ ಸಂಖ್ಯೆ ಅಧಿಕಗೊಳ್ಳುತ್ತಿದ್ದರೂ, ಗುಣಮುಖ ಪ್ರಮಾಣ ಹೆಚ್ಚಿರುವುದೂ ಸಮಾಧಾನಕರ ಅಂಶ. ಕರೊನಾ ಸಾವಿನ ರಾಷ್ಟ್ರೀಯ ಸರಾಸರಿ ಶೇ.3.3ರ ಮುಂದೆ ದೆಹಲಿಯ ಸರಾಸರಿ 1.07% ಮಾತ್ರ.

ಸಾಮುದಾಯಿಕ ಪ್ರಸರಣ

ದೆಹಲಿಯಲ್ಲಿ ಮೊದಲ ಕೇಸು ಪತ್ತೆಯಾಗಿದ್ದು ಮಾರ್ಚ್ 2ರಂದು. ನಂತರ 40 ದಿನಗಳಲ್ಲಿ ಅದು 1000 ದಾಟಿತ್ತು. ಅದಾದ 8 ದಿನಗಳಲ್ಲಿ 2003ಕ್ಕೆ ತಲುಪಿದ ಸೋಂಕಿತರ ಸಂಖ್ಯೆ, ನಂತರದ 12 ದಿನಗಳಲ್ಲಿ 4122ಕ್ಕೆ ಏರಿಕೆಯಾಗಿತ್ತು. ಮತ್ತೆರಡು ದಿನಗಳಲ್ಲಿ 5000 ದಾಟಿದ ಸೋಂಕಿತರ ಸಂಖ್ಯೆ ಈಗ 7000ಕ್ಕೆ ಬಂದಿದೆ. ವೈರಾಣು ಈಗಾಗಲೇ ಸಾಮುದಾಯಿಕವಾಗಿ ಹಬ್ಬಿದೆ ಮತ್ತು ಅದರಿಂದಾಗಿಯೇ ಕೇಸುಗಳು ದ್ವಿಗುಣಗೊಳ್ಳುತ್ತಿವೆ. ಸೋಂಕಿತ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಸಾಧಿಸಿದ ಮಾಹಿತಿ ಇಲ್ಲದವರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ಆತಂಕಕಾರಿ ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳುತ್ತಾರೆ. ಸಣ್ಣಪುಟ್ಟ ಲಕ್ಷಣವುಳ್ಳವರನ್ನು ಮನೆಯಲ್ಲೇ ರಕ್ಷಣಾ ಕ್ರಮಗಳೊಂದಿಗೆ ಸೋಂಕಿನಿಂದ ಹೊರಬರುವಂತೆ ಮಾಡಿ, ಗಂಭೀರ ಸೋಂಕಿದ್ದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವುದು ಹಲವು ರೀತಿಯಲ್ಲಿ ಅಪಾಯಕಾರಿ ಎನ್ನುವುದು ಡಾ. ಸಚಿತ್ ಶೆಟ್ಟಿ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net