

ಚೆನ್ನೈ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ತಮಿಳುನಾಡು ಘಟಕದ ಅಧ್ಯಕ್ಷ ಕೆ.ಆರ್ಮ್‌ಸ್ಟ್ರಾಂಗ್ ಅವರ ಪಾರ್ಥಿವ ಶರೀರವನ್ನು ಪಕ್ಷದ ಕಚೇರಿ ಆವರಣದಲ್ಲಿಯೇ ಸಂಸ್ಕಾರ ಮಾಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಭಾನುವಾರ ವಜಾಗೊಳಿಸಿದೆ. ಆರ್ಮ್‌ಸ್ಟ್ರಾಂಗ್ ಪತ್ನಿ ಕೆ.ಪೊರ್ಕೋಡಿ ಅರ್ಜಿ ಸಲ್ಲಿಸಿದ್ದರು.
ಪಕ್ಷದ ಕಚೇರಿ ಜನವಸತಿ ಪ್ರದೇಶದಲ್ಲಿರುವುದರಿಂದ ಅರ್ಜಿದಾರರ ಮನವಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ವಿ.ಭವಾನಿ ಸುಬ್ಬರಾಯನ್ ತಿಳಿಸಿದ್ದಾರೆ.
ಪರ್ಯಾಯವಾಗಿ ಬೇರೆ ಯಾವುದಾದರೂ ನಿವೇಶನ ಬೇಕೇ ಎಂದು ಅರ್ಜಿದಾರರನ್ನು ಕೇಳಲಾಗಿತ್ತು. ಅರ್ಜಿದಾರರು ತಿರುವಳ್ಳೂರು ಪ್ರದೇಶವನ್ನು ಉಲ್ಲೇಖಿಸಿದ್ದರಿಂದ ಪೊತ್ತೂರು ಪಂಚಾಯತ್‌ನ ಖಾಸಗಿ ಜಮೀನಿನಲ್ಲಿ ಹೂಳಲು ನ್ಯಾಯಾಲಯ ಅನುಮತಿ ನೀಡಿದೆ.
ಆರ್ಮ್‌ಸ್ಟ್ರಾಂಗ್ ಕುಟುಂಬವು ಸ್ಮಾರಕವನ್ನು ನಿರ್ಮಿಸಲು ಬಯಸಿದ್ದರಿಂದ ಯಾವುದೇ ಗೊಂದಲವಿಲ್ಲದೆ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಬೇಕು. ನಂತರ ಸ್ಮಾರಕದ ಬಗ್ಗೆ ರಾಜ್ಯ ಸರ್ಕಾರವನ್ನು ಸಂಪರ್ಕಿಸಬೇಕು ಎಂದು ನ್ಯಾಯಮೂರ್ತಿ ಭವಾನಿ ಸುಬ್ಬರಾಯನ್ ಸೂಚಿಸಿದರು.
ಆರ್ಮ್‌ಸ್ಟ್ರಾಂಗ್ (47) ಅವರನ್ನು ಶುಕ್ರವಾರ(ಜು.5) ಸಂಜೆ ಅವರ ಮನೆಯ ಸಮೀಪ ಆರು ಜನರು ಬರ್ಬರವಾಗಿ ಕೊಂದಿದ್ದರು. ಈ ಕೊಲೆ ಸಂಚಲನ ಮೂಡಿಸುತ್ತಿದ್ದಂತೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದ್ದು, ಇದುವರೆಗೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕೊಲೆಯ ಹಿಂದೆ ಯಾವುದೇ ರಾಜಕೀಯ ದೃಷ್ಟಿಕೋನವಿಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದೇ ವೇಳೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.