ತಿನ್ನುತ್ತಲೇ ಗಂಟೆಗೆ 1700 ರೂ. ಸಂಪಾದಿಸಿ: ಕೆಲಸಕ್ಕೆ ಅರ್ಜಿ ಸಲ್ಲಿಸಲು ಫೆ. 15 ಕೊನೆಯ ದಿನಾಂಕ!

Job
Published on

ನವದೆಹಲಿ: ಎಲ್ಲಾರು ಮಾಡುವುದು ಹೊಟ್ಟೆಗಾಗಿ... ಗೇಣು ಬಟ್ಟೆಗಾಗಿ ಎಂಬ ಮಾತಿದೆ. ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಕಷ್ಟಪಟ್ಟು ದುಡಿಯುವ ಎಷ್ಟೋ ಮಂದಿ ಈ ಪ್ರಪಂಚದಲ್ಲಿದ್ದಾರೆ. ಹಣ ಸಂಪಾದನೆಗೆ ಸಕಲವನ್ನು ತ್ಯಜಿಸಿ ಉದ್ಯೋಗ ಅರಸಿ ತಾನು ಜನಿಸಿದ ಪ್ರದೇಶವನ್ನು ಬಿಟ್ಟು ಬೇರೆಲ್ಲೋ ದುಡಿಯುವ ಕೈಗಳನ್ನು ಕಂಡಿದ್ದೇವೆ. ಏನೇ ಮಾಡಿದರು ಎಲ್ಲವು ಹೊಟ್ಟೆಗಾಗಿ. ಆದರೆ, ತಿನ್ನುತ್ತಲೇ ಹಣ ಸಂಪಾದಿಸುವ ವಿಶೇಷ ಕೆಲಸವೊಂದಿದೆ.

ಹೌದು. ಎಲ್ಲಿಗೂ ಹೋಗದೆ ಇದ್ದಲ್ಲೇ ಕುಳಿತು ರುಚಿ ನೋಡುವ ಅನೇಕ ಕೆಲಸಗಳಿವೆ. ಅದಕ್ಕಾಗಿಯೇ ದೊಡ್ಡ ಮೊತ್ತದ ಸಂಬಳವನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಫಿ ಮತ್ತು ಟೀ ರುಚಿ ಪರೀಕ್ಷೆ ಮಾಡುವ ಉದ್ಯೋಗಗಳು ಪ್ರಖ್ಯಾತಿಯಾಗಿವೆ. ಅದೇ ರೀತಿ ತಿನ್ನುತ್ತಾ ಸಂಪಾದಿಸುವ ಇನ್ನು ಕೆಲವು ಉದ್ಯೋಗಗಳಿವೆ.

ಗಂಟೆಗೆ 1700 ರೂಪಾಯಿ

ಇದೀಗ ಅದೇ ಅವಕಾಶವನ್ನು ಕೆನಾಡದ ಕ್ಯಾಂಡಿ ಫನ್​ ಹೌಸ್ ಕಂಪನಿ ಉದ್ಯೋಗಾಂಕ್ಷಿಗಳಿಗೆ ನೀಡಿದೆ. ಕ್ಯಾಂಡಿಗಳು ಮತ್ತು ಚಾಕೋಲೇಟ್​ಗಳನ್ನು ತಯಾರಿಸುವ ಕಂಪನಿಯಾಗಿದ್ದು, ಇಲ್ಲಿ ತಯಾರಾಗುವ ಪದಾರ್ಥಗಳ ರುಚಿ ನೋಡಿ ಯಾವುದು ಅತ್ಯುತ್ತಮ ಎಂದು ಹೇಳುವುದೇ ಕೆಲಸವಾಗಿದೆ. ಇದಕ್ಕಾಗಿ ಆಕರ್ಷಕ ಸಂಬಳವೂ ನಿಗದಿಯಾಗಿದೆ. ಗಂಟೆಗೆ 30 ಕೆನಡಿಯನ್​ ಡಾಲರ್​ ನೀಡಲಾಗುತ್ತದೆ. ಭಾರತದ ಕರೆನ್ಸಿ ಪ್ರಕಾರ ಗಂಟೆಗೆ 1,700 ರೂಪಾಯಿ. ಈ ಉದ್ಯೋಗಕ್ಕೆ ಕ್ಯಾಂಡಿಯಾಲಜಿಸ್ಟ್ ಎಂತಲೂ ಕರೆಯಲಾಗುತ್ತದೆ.

ಅರ್ಜಿ ಸಲ್ಲಿಸಲು ಫೆ. 15 ಕೊನೆಯ ದಿನಾಂಕ

ಕೆಲಸಕ್ಕಾಗಿ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಮುಂದೆ ಇದಿ ಓದಿ... "ಕ್ಯಾಂಡಿ ಫನ್​ಹೌಸ್​" ಅಧಿಕೃತ ವೆಬ್​ಸೈಟ್​ ಹೋಗಿ ನೀವು ಅರ್ಜಿ ಸಲ್ಲಿಸಬಹುದಾಗಿದೆ. ವೆಬ್​ಸೈಟ್​ನ ಅರ್ಜಿ ನಮೂನೆಯಲ್ಲಿ ಕ್ಯಾಂಡಿ ಮತ್ತು ಚಾಕೋಲೇಟ್​ ಟೇಸ್ಟ್​ ಟೆಸ್ಟರ್​ ಜಾಬ್​ ಎಂದು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಅದೃಷ್ಟ ಪರೀಕ್ಷೆ ಒಮ್ಮೆ ಪರೀಕ್ಷಿಸಿ. ಅಂದಹಾಗೆ ಅರ್ಜಿಯ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನಾಂಕ.

ಪರೀಕ್ಷೆ ಹೇಗೆ ನಡೆಯುತ್ತದೆ?

ಈ ಸಮಯದೊಳಗೆ ಅರ್ಜಿ ಸಲ್ಲಿಸಿದರೆ, ಕಂಪನಿ ತಾನು ತಯಾರಿಸಿದ ಪದಾರ್ಥಗಳನ್ನು ಟೇಸ್ಟ್​ ನೋಡಲು ಹೇಳಿ ಪರೀಕ್ಷೆ ಮಾಡುತ್ತದೆ. ಎಲ್ಲವನ್ನು ಟೇಸ್ಟ್​ ಮಾಡಿ ಅವು ಹೇಗಿವೆ ಎಂದು ವಿವರಿಸಬೇಕು. ಇದರಲ್ಲಿ ಆಯ್ಕೆಯಾದವರಿಗೆ ತಿಂದು ಸಂಪಾದಿಸುವ ಉದ್ಯೋಗ ಸಿಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net