ಪ್ರೇಯಸಿ ಇಲ್ಲದ ಜೀವನ ವ್ಯರ್ಥ: ತಾಯಿಗೆ ಸೆಲ್ಫಿ ವಿಡಿಯೋ ಕಳಿಸಿ ದುಬೈನಲ್ಲಿ ಯುವಕ ಆತ್ಮಹತ್ಯೆಗೆ ಶರಣು!

Telangana Youth
Published on

ಹೈದರಾಬಾದ್​: ನೇಣು ಬಿಗಿದುಕೊಂಡು ಗರ್ಲ್​ಫ್ರೆಂಡ್​ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಕೇಳಿ ಯುವಕನೊಬ್ಬ ದೂರದ ದುಬೈನಲ್ಲಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮದುವೆ ಮಾಡಲು ಯುವತಿಗೆ ಪಾಲಕರು ವರನ ಹುಡುಕಾಟದಲ್ಲಿದ್ದರು. ಆದರೆ, ಬಾಯ್​ಫ್ರೆಂಡ್​ ಬಿಟ್ಟು ಬೇರೆಯವರನ್ನು ಮದುವೆಯಾಗಲು ಇಚ್ಛಿಸದ ಯುವತಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ.

ಇತ್ತ ದುಬೈನಲ್ಲಿದ್ದ ಯುವಕನಿಗೆ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾದ ಕೂಡಲೇ ಮನನೊಂದು ಚಾಕುವಿನಿಂದ ಇರಿದುಕೊಂಡು ಪ್ರಾಣ ಬಿಟ್ಟಿದ್ದಾನೆ. ಸಾಯುವುದಕ್ಕೂ ಮುನ್ನ ಗರ್ಲ್​ಫ್ರೆಂಡ್​ ಇಲ್ಲದ ಜೀವನ ವ್ಯರ್ಥ ಎಂದು ಸೆಲ್ಫಿ ವಿಡಿಯೋ ಮಾಡಿ, ತಾಯಿಗೆ ಕಳುಹಿಸಿದ್ದಾನೆ.

ಮೃತ ಯುವಕನನ್ನು ಮನಾಲಾ ರಾಜೇಶ್​ (24) ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ಜಗಿತ್ತಲ ಜಿಲ್ಲೆಯ ಗೊಲ್ಲಪೆಲ್ಲಿ ಮಂಡಲದ ಲಕ್ಷ್ಮೀಪುರ ಗ್ರಾಮದವನು. ಅದೇ ಜಿಲ್ಲೆಯ ಗೋವಿಂದಪಲ್ಲಿ ಗ್ರಾಮದ ಯುವತಿಯನ್ನು ಕಳೆದ ನಾಲ್ಕು ವರ್ಷಗಳಿಂದ ರಾಜೇಶ್​ ಪ್ರೀತಿಸುತ್ತಿದ್ದ. ಆಕೆಯು ಸಹ ರಾಜೇಶ್​ನನ್ನು ತುಂಬಾ ಇಷ್ಟಪಡುತ್ತಿದ್ದಳು. ಹೀಗಿರುವಾಗ ರಾಜೇಶ್​ ಕೆಲಸಕ್ಕೆಂದು ಎರಡು ವರ್ಷಗಳ ಹಿಂದೆ ದುಬೈ ಹಾರಿದ್ದ. ಮರಳಿ ಬಂದಾಗ ಮದುವೆ ಮಾಡಿಕೊಳ್ಳಲು ಇಬ್ಬರು ನಿರ್ಧರಿಸಿದ್ದರು.

ಇದರ ನಡುವೆ ಮಗಳ ಪ್ರೀತಿಯ ವಿಚಾರ ಮನೆಯವರಿಗೆ ತಿಳಿದಿದೆ. ಪ್ರೀತಿಗೆ ಒಪ್ಪದೆ ಯುವತಿಗೆ ಬೇರೆ ಮದುವೆ ಮಾಡಲು ಯುವಕನ ಹುಡುಕಾಟದಲ್ಲಿ ಪಾಲಕರು ನಿರತರಾಗಿದ್ದರು. ಇತ್ತ ರಾಜೇಶ್​ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲು ಒಪ್ಪದ ಯುವತಿ ಮನನೊಂದು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.

ಅತ್ತ ಪ್ರೇಯಸಿಯ ಸಾವಿನ ಸುದ್ದಿ ಕೇಳಿದ ರಾಜೇಶ್​ ದುಬೈನಲ್ಲಿ ತಾನು ಉಳಿದುಕೊಂಡಿದ್ದ ಕೊಠಡಿಯಲ್ಲಿ ಚಾಕು ಇರಿದುಕೊಂಡು ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ ತನ್ನ ಪ್ರೀತಿಯನ್ನು ವಿವರಿಸಿ ಸೆಲ್ಫಿ ವಿಡಿಯೋ ಮಾಡಿ ತಾಯಿಗೆ ಕಳುಹಿಸಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿ ರಾಜೇಶ್​ ಕುಟುಂಬ ಆಘಾತಕ್ಕೆ ಒಳಗಾಗಿದೆ. ದುಬೈಗೆ ಹೋದ ಮಗನ ಭವಿಷ್ಯ ಸುಂದರವಾಗಲಿದೆ ಎಂದು ಕನಸು ಹೊಂದಿದ್ದ ಕುಟುಂಬದಲ್ಲಿ ಇದೀಗ ಕಾರ್ಮೋಡ ಕವಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net