ಶಾಸಕ ಮುನಿರತ್ನರ ಸದಸ್ಯತ್ವ ರದ್ದುಗೊಳಿಸಿ

ಶಾಸಕ ಮುನಿರತ್ನರ ಸದಸ್ಯತ್ವ ರದ್ದುಗೊಳಿಸಿ
Published on

ಹುಣಸೂರು: ಜಾತಿ ನಿಂದನೆ, ಅತ್ಯಾಚಾರ ಮುಂತಾದ ಆರೋಪಗಳಿಗೆ ಒಳಗಾಗಿರುವ ಆರ್.ಆರ್. ನಗರದ ಶಾಸಕ ಮುನಿರತ್ನ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು ಶಾಸಕ ಮುನಿರತ್ನ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸಮಿತಿ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ಶಾಸಕ ಮುನಿರತ್ನ ಕೆಲವು ದಿನಗಳ ಹಿಂದೆ ದಲಿತ ಗುತ್ತಿಗೆದಾರನಿಗೆ ಜಾತಿ ನಿಂದನೆ ಮಾಡಿ ದೌರ್ಜನ್ಯ ಮಾಡಿದ್ದಾರೆ. ಮಹಿಳೆಗೆ ಆಮಿಷ ತೋರಿಸಿ ತಮ್ಮ ರಾಜಕೀಯ ಪ್ರಭಾವದಿಂದ ಅತ್ಯಾಚಾರವೆಸಗಿರುವ ಆರೋಪವಿದೆ. ಈ ಸಂಬಂಧ ಎರಡು ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯ ಪ್ರಕರಣ ಹಾಗೂ ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಜನರಿಂದ ಆಯ್ಕೆಯಾದ ಶಾಸಕ ಮುನಿರತ್ನ ಸಮಾಜಕ್ಕೆ ಮಾದರಿಯಾಗಿರುವುದನ್ನು ಬಿಟ್ಟು ಕೊಳಕು ಮನಸ್ಸಿನ ಅನಾಚಾರ ಕೆಲಸಗಳನ್ನು ಮಾಡಿರುವುದು ಸಮಾಜವೇ ತಲೆತಗ್ಗಿಸುವ ಕೆಲಸವಾಗಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಉಪ ತಹಸೀಲ್ದಾರ್ ನರಸಿಂಹಯ್ಯ ಮನವಿ ಪತ್ರ ಸ್ವೀಕರಿಸಿದರು. ಮುಖಂಡ ದೇವೇಂದ್ರ ಕುಳುವಾಡಿ, ಚಾಮನಾಯ್ಕ, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಮಲ್ಲಿಕ್ ಯಶೋಧರಪುರ, ದಲಿತ ಮಹಿಳಾ ಒಕ್ಕೂಟದ ಕಮಲಾಬಾಯಿ, ಲಕ್ಷ್ಮೀಬಾಯಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net