ಕಾಲುವೆಗಳಿಗೆ ನಿಗದಿಯಂತೆ ನೀರು ಹರಿಸಿ

18SND-02
ಸಿಂಧನೂರು ತಾಲೂಕಿನ ತುಂಗಭದ್ರಾ ಎಡದಂಡೆ ಮುಖ್ಯ ನಾಲೆಯ ಉಪಕಾಲುವೆಗಳ ನೀರಿನ ಹರಿವು ಗೇಜನ್ನು ಶಾಸಕ ಹಂಪನಗೌಡ ಬಾದರ್ಲಿ ಪರಿಶೀಲಿಸಿದರು. ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ನೀರಾವರಿ ಇಲಾಖೆ ಇಇ ಸತ್ಯನಾರಾಯಣ ಶ್ರೇಷ್ಠಿ, ಆನಂದ ಬೊಮ್ಮನಾಳ ಇದ್ದರು.
Published on

ಸಿಂಧನೂರು:  ತಾಲೂಕಿನ 54, 36, 32 ಸೇರಿ ಇತರ ಉಪಕಾಲುವೆಗಳ ಕೆಳಭಾಗದ ರೈತರಿಗೆ ಸಮರ್ಪಕ ನೀರು ಹರಿಸಬೇಕು. ಗೇಜ್ ವ್ಯತ್ಯಾಸವಾದರೆ ನೀರಾವರಿ ಇಲಾಖೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಎಚ್ಚರಿಸಿದರು.

ತುಂಗಭದ್ರಾ ಎಡದಂಡೆ ಮುಖ್ಯ ನಾಲೆಯ ಉಪಕಾಲುವೆಗಳ ನೀರಿನ ಹರಿವು ಗೇಜನ್ನು ಶನಿವಾರ ವೀಕ್ಷಿಸಿ ಮಾತನಾಡಿದರು. ಹೆಚ್ಚಿನ ಭೂಮಿಗೆ ನೀರುಣಿಸುವ 54 ಹಾಗೂ 36 ಉಪಕಾಲುವೆಗಳಿಗೆ ಸಮರ್ಪಕ ನೀರು ಹರಿಯದಿರುವ ಬಗ್ಗೆ ರೈತರು ದೂರುತ್ತಿದ್ದಾರೆ.

ನೀರಿನ ಗೇಜ್‌ಗಳನ್ನು ಸ್ವತಃ ಅಧಿಕಾರಿಗಳೇ ಕಡಿಮೆ ಮಾಡುತ್ತಿದ್ದಾರೆಂಬ ಆರೋಪವಿದ್ದು, ಹಾಗೆ ಮಾಡಬೇಡಿ. ಯಾವುದೇ ಕಾರಣಕ್ಕೂ ನೀರು ಕಡಿಮೆ ಮಾಡಬಾರದು. ನಿಗದಿಯಂತೆ ನೀರು ಹರಿಸಬೇಕೆಂದು ತಾಕೀತು ಮಾಡಿದರು.

ಕೆಳ ಭಾಗದ ರೈತರಿಗೆ ಕಳೆದ 15 ದಿನಗಳಿಂದ ನೀರು ಹೋಗುತ್ತಿಲ್ಲ. ಈಗಾಗಲೇ ರೈತರು ಖುದ್ದಾಗಿ ನೀರಾವರಿ ಇಲಾಖೆಗೆ ಭೇಟಿ ನೀಡಿ, ಸಮಸ್ಯೆ ಹೇಳಿಕೊಂಡಿದ್ದು ಪರಿಹಾರವಾಗಿಲ್ಲ ಎಂದು ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಅವರು ಶಾಸಕರ ಗಮನಕ್ಕೆ ತಂದರು. ನೀರಾವರಿ ಇಲಾಖೆ ಇಇ ಸತ್ಯನಾರಾಯಣ ಶ್ರೇಷ್ಠಿ, ಎಇಇ ದೌಲಸಾಬ್, ಪ್ರಮುಖರಾದ ಛತ್ರಪ್ಪ ಕುರುಕುಂದಿ, ಆನಂದ ಬೊಮ್ಮನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net