

ಮಾನ್ವಿ: ತುಂಗಭದ್ರಾ ಎಡದಂಡೆಯ 76ನೇ ಉಪಕಾಲುವೆಗೆ ಸಮರ್ಪಕ ನೀರು ಹರಿಸುವಂತೆ ನಂ.4 ಕಾಲುವೆ ಉಪವಿಭಾಗದ ಕಚೇರಿಯ ಆವರಣದಲಿ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಶಾಂತರಾಜಗೆ ಮಂಗಳವಾರ ಮನವಿಸಲಿಸಲಾಯಿತು.
ಹಿಂಗಾರು ಬೆಳೆಗಳಿಗೆ ಜ.1 ರಿಂದ 76ನೇ ವಿತರಣಾ ಕಾಲುವೆಯ ವ್ಯಾಪ್ತಿಯಲ್ಲಿ ಬರುವ 35 ಗ್ರಾಮಗಳು ಸೇರಿದಂತೆ 31 ಕಿ.ಮೀ.ಗಳ ವರೆಗೆ ನೀರು ಹರಿಸುವುದಾಗಿ ಐಸಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈವರೆಗೂ ಕಾಲುವೆಗಳಿಗೆ ನೀರು ಬಿಟ್ಟಿಲ್ಲ ಎಂದು ದೂರಿದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಶಾಂತರಾಜ ಮಾತನಾಡಿ , ಉಪ ಕಾಲುವೆ 76 ಕ್ಕೆ ಮುಖ್ಯ ಕಾಲುವೆಯಿಂದ 4 ಮೀಟರ್ ಗೇಜ್ ನೀಡಬೇಕು. ಆದರೆ 3.5 ಮೀಟರ್ ಗೇಜ್ ನೀಡಲಾಗುತ್ತಿದೆ. ಲಭ್ಯವಿರುವ ನೀರನ್ನು ಭತ್ತದ ಸಸಿ ಮಡಿ ನಾಟಿಗೆ ಅಗತ್ಯವಿರುವ ನೀರನ್ನು ನೀಡಲಾಗಿದ್ದು ಗೇಜ್ ಹೆಚ್ಚಿದ ನಂತರ ರೋಟೆಷನ್ ಪದ್ಧತಿಯಂತೆ ವಾರಬಂದಿ ಪ್ರಕಾರ ನೀರು ಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕೆ.ವೈ.ಬಸವರಾಜ ನಾಯಕ, ಶಿವರಾಜ್ ಉದ್ಬಾಳ್, ಹೊಳೆಯಪ್ಪ ಉಟಕನೂರು, ರವಿಸ್ವಾಮಿ, ನರಸರೆಡ್ಡೆಪ್ಪ, ಸಿದ್ದರಾಮೇಶ, ವೀರನಗೌಡ, ಅಚ್ಚಯತ್ತರಾಯ, ಸತ್ಯನಾರಾಯಣ, ಉದ್ದಾನಪ್ಪಗೌಡ, ವಿಜಯಕುಮಾರ ಪಿಎಸ್ಐ ವೀರನಗೌಡ ಕರಡಿಗುಡ್ಡ ಇನ್ನಿತರರು ಇದ್ದರು.