

ಕೆನಡಾದಲ್ಲಿ ಕರೊನಾ ಸಾಂಕ್ರಾಮಿಕದ ಮೊದಲ ಕೇಸು ಪತ್ತೆಯಾಗಿದ್ದು ಜನವರಿ 27ರಂದು. ಚೀನಾದ ಹುಬೈ, ವುಹಾನ್ನಿಂದ ಟೊರೊಂಟೊಗೆ ಮರಳಿದ್ದ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮೇ 29ರ ವೇಳೆಗೆ ಇಲ್ಲಿ 89,400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 47,518 ಮಂದಿ ಗುಣಮುಖರಾಗಿದ್ದರೆ, 6,979 ಮಂದಿ ಮೃತಪಟ್ಟಿದ್ದಾರೆ. ಆದರೆ, ಕಳೆದ ನಾಲ್ಕು ದಿನಗಳಲ್ಲಿ 1000ಕ್ಕಿಂತ ಕಡಿಮೆ ಕೇಸುಗಳು ದಾಖಲಾಗಿದ್ದು, ಸಣ್ಣ ಮಟ್ಟಿನ ಇಳಿಕೆ ಕಂಡಿರುವುದು ಸಮಾಧಾನಕರ ವಿಷಯ ಎಂದು ಸರ್ಕಾರ ಹೇಳಿದೆ.
ಕೆನಡಾದಲ್ಲಿ ಎಲ್ಲಿ ಹೆಚ್ಚು ಜನಸಂಖ್ಯೆಯಿದೆಯೋ ಅಲ್ಲಿ ಕರೊನಾ ಕೇಸುಗಳು ಕಂಡುಬಂದಿವೆ. ಒಂಟಾರಿಯೊದಲ್ಲಿ 27,210 ಪ್ರಕರಣಗಳು, 2,230 ಸಾವು ಮತ್ತು ಕ್ವಿಬೆಕ್ನಲ್ಲಿ 50,232 ಪ್ರಕರಣಗಳು, 4,363 ಸಾವಿನ ಪ್ರಕರಣ ದಾಖಲಾಗಿದೆ. ನುನಾವುಟ್ ಹೊರತುಪಡಿಸಿ, ಕೆನಡಾದ ಎಲ್ಲ ಪ್ರಾಂತ್ಯಗಳಲ್ಲಿ ಕರೊನಾ ಪತ್ತೆಯಾಗಿದೆ. ಕೆನಡಾದಲ್ಲಿ ಸಮುದಾಯ ಪ್ರಸರಣದ ಮೊದಲ ಪ್ರಕರಣವನ್ನು ಮಾರ್ಚ್ 5ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ದೃಢಪಡಿಸಲಾಯಿತು. ಲಾಕ್ಡೌನ್ ಜತೆಗೆ ಕೆನಡಾ ತನ್ನ ಗಡಿಪ್ರದೇಶಗಳನ್ನು ನಿರ್ಬಂಧಿಸಿದೆ. ವೈರಸ್ಗೆ ತುತ್ತಾದ ಕೆನಡಿಯನ್ನರಲ್ಲಿ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊಯಿರ್ ಟ್ರುಡೊ ಕೂಡ ಇದ್ದಾರೆ. ಮಾರ್ಚ್ 12 ರಂದು ಅವರಲ್ಲಿ ವೈರಸ್ ಕಂಡುಬಂದಿತ್ತು. ನಂತರ ಕುಟುಂಬವು ಸ್ವಯಂ-ದಿಗ್ಬಂಧನಕ್ಕೆ ಒಳಪಟ್ಟಿತು. ಮಾರ್ಚ್ 28ರ ವೇಳೆಗೆ ಅವರು ಚೇತರಿಸಿಕೊಂಡರು.
ಅಕ್ಟೋಬರ್ವರೆಗೆ ಕ್ರೂಸ್ ಹಡಗುಗಳ ಸಂಚಾರ ನಿರ್ಬಂಧ: ಕರೊನಾದಿಂದಾಗಿ ಅಕ್ಟೋಬರ್ 31ರವರೆಗೆ ಕೆನಡಾದಲ್ಲಿ ಬೃಹತ್ ಕ್ರೂಸ್ ಹಡಗುಗಳು ಕಾರ್ಯನಿರ್ವಹಿಸುವುದರ ಮೇಲೆ ಸರ್ಕಾರ ನಿರ್ಬಂಧ ಹೇರಿದೆ. ಜುಲೈ 1ರ ನಂತರ ಸಣ್ಣ ಹಡಗುಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಗಿದೆ. 12ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ಹಡಗುಗಳ ಸಂಚಾರಕ್ಕೆ ಅನುಮತಿ ಇಲ್ಲ. ಕಳೆದ ವರ್ಷ, 140 ಕ್ರೂಸ್ ಹಡಗುಗಳು ಕೆನಡಾದ ಬಂದರುಗಳಲ್ಲಿ 2 ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಪ್ರಯಾಣಕ್ಕೆ ಸಾಕ್ಷಿಯಾಗಿದ್ದವು. ಕೆನಡಾದ ಆರ್ಥಿಕತೆಗೆ ಕ್ರೂಸ್ ಹಡಗುಗಳು 3 ಬಿಲಿಯನ್ ಕೆನಡಿಯನ್ (ಯುಎಸ್ 2.1 ಬಿಲಿಯನ್) ಗಿಂತಲೂ ಹೆಚ್ಚು ಲಾಭದ ಕೊಡುಗೆ ನೀಡಿವೆ. ಕೆನಡಾದ 23,000ಕ್ಕೂ ಹೆಚ್ಚು ಮಂದಿ ಕ್ರೂಸ್ ಹಡಗುಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ನೌಕರಿ ಕಂಡುಕೊಂಡಿದ್ದಾರೆ.