

ನವದೆಹಲಿ/ಒಟ್ಟಾವಾ: ಭಾರತ-ಕೆನಡಾ ನಡುವಿನ ನೇರ ಪ್ರಯಾಣಿಕರ ವಿಮಾನಗಳ ಹಾರಾಟವನ್ನು ಸೆಪ್ಟೆಂಬರ್ 27ರ ಸೋಮವಾರದಿಂದ ಪುನರಾರಂಭಿಸಲಾಗುತ್ತಿದೆ. ಈ ವರ್ಷದ ಏಪ್ರಿಲ್ನಲ್ಲಿ ಭಾರತವನ್ನು ಕೋವಿಡ್-19 ರ ಎರಡನೇ ಅಲೆಯು ಅಪ್ಪಳಿಸಿದಾಗ ವಿಧಿಸಿದ್ದ ನಿಷೇಧವನ್ನು 5 ತಿಂಗಳ ನಂತರ ಕೆನಡಾ ತೆಗೆದುಹಾಕಿದೆ.
ಸೆಪ್ಟೆಂಬರ್ 27 ರಂದು ಭಾರತೀಯ ಸಮಯ ಬೆಳಿಗ್ಗೆ 9.30ರಿಂದ ಕೆನಡಾಕ್ಕೆ ನೇರ ವಿಮಾನಗಳಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿರುವ ಕೆನಡಾ ಏರ್ ಟ್ರಾನ್ಸ್ಪೋರ್ಟ್ ಇಲಾಖೆ, ಹೆಚ್ಚುವರಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಪಾಲಿಸಬೇಕು ಎಂದಿದೆ. “ಯಾತ್ರಿಕರು, ವಿಮಾನ ಹೊರಡುವ 18 ಗಂಟೆಗಳ ಒಳಗಿನ, ಅನುಮೋದಿತ ಜೀನ್ಸ್ಟ್ರಿಂಗ್ಸ್ ಲ್ಯಾಬೋರೇಟರಿಯ ಕರೊನಾ ನೆಗೆಟೀವ್ ಆರ್ಟಿಪಿಸಿಆರ್ ವರದಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಹೊಂದಿರಬೇಕು. ಏರ್ ಆಪರೇಟರ್ಗೆ ಲ್ಯಾಬ್ ನೀಡಿರುವ ಪರೀಕ್ಷಾ ವರದಿಯ ಕ್ಯೂಆರ್ ಕೋಡ್ಅನ್ನು ತೋರಿಸಬೇಕು" ಎಂದು ಟ್ರಾವೆಲ್ ಅಡ್ವೈಸರಿ ಹೇಳಿದೆ.
'ಕೆನಡಾ ಏರ್' ಸೋಮವಾರ ಎರಡು ದೇಶಗಳ ನಡುವಿನ ಮೊದಲ ನೇರ ಹಾರಾಟ ನಡೆಸಲಿದೆ. 'ಏರ್ ಇಂಡಿಯಾ' ವಿಮಾನಗಳು ಸೆಪ್ಟೆಂಬರ್ 30 ರಂದು ಸೇವೆಗಳನ್ನು ಪುನರಾರಂಭಿಸಲಿವೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)